ಡಿಸಿಎಂ ಬೇಡಿಕೆ ಬೆನ್ನಲ್ಲೇ ಸಚಿವರು, ಶಾಸಕರ ಮಧ್ಯೆ ಶುರುವಾಯ್ತು ಸಂಘರ್ಷ; ಹೈಕಮಾಂಡ್ ಭೇಟಿಗೆ ತೆರಳಿದ ಲಿಂಗಾಯತ ಶಾಸಕರ ನಿಯೋಗ

| Updated By: Ganapathi Sharma

Updated on: Jun 25, 2024 | 2:28 PM

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕೆಲವೇ ದಿನಗಳಾಗಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಒಂದಲ್ಲ ಒಂದು ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲು ಆರಂಭವಾಗಿದೆ. ಒಂದೆಡೆ, ಹೆಚ್ಚುವರಿ ಡಿಸಿಎಂ ಹುದ್ದೆಗೆ ಆಗ್ರಹ ವ್ಯಕ್ತವಾಗಿದ್ದರೆ ಇದೀಗ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರ ನಡುವೆಯೇ ಫೈಟ್ ಶುರುವಾಗಿದೆ. ಆ ಕುರಿತ ವಿವರ ಇಲ್ಲಿದೆ.

ಡಿಸಿಎಂ ಬೇಡಿಕೆ ಬೆನ್ನಲ್ಲೇ ಸಚಿವರು, ಶಾಸಕರ ಮಧ್ಯೆ ಶುರುವಾಯ್ತು ಸಂಘರ್ಷ; ಹೈಕಮಾಂಡ್ ಭೇಟಿಗೆ ತೆರಳಿದ ಲಿಂಗಾಯತ ಶಾಸಕರ ನಿಯೋಗ
ಡಿಸಿಎಂ ಬೇಡಿಕೆ ಬೆನ್ನಲ್ಲೇ ಸಚಿವರು, ಶಾಸಕರ ಮಧ್ಯೆ ಶುರುವಾಯ್ತು ಸಂಘರ್ಷ
Follow us on

ಬೆಂಗಳೂರು, ಜೂನ್ 25: ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಡಿಸಿಎಂ ಹುದ್ದೆ ಹೆಚ್ಚಿಸುವ ಬಗ್ಗೆ ಚರ್ಚೆ ಮತ್ತೆ ಜೋರಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸುತ್ತಿನ ಸಂಘರ್ಷ ಆರಂಭವಾಗಿದೆ. ಸಚಿವರು ಮತ್ತು ಶಾಸಕರ ನಡುವಿನ‌ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಲಿಂಗಾಯತ ಶಾಸಕರ (Lingayat MLAs) ನಿಯೋಗ ಹೈಕಮಾಂಡ್ ಭೇಟಿಗೆ ತೆರಳಿದೆ. ಎರಡು ಪ್ರಮುಖ ವಿಚಾರಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಲಿಂಗಾಯತ ಶಾಸಕರ ನಿಯೋಗ ತೆರಳಿದೆ.

ನಿಯೋಗದಲ್ಲಿ ಬಾಬಾ ಸಾಹೇಬ್ ಪಾಟೀಲ್, ಯಶವಂತ ರಾಯಗೌಡ ಪಾಟೀಲ್ ಕೂಡ ಇರುವ ಬಗ್ಗೆ ಮಾಹಿತಿ ದೊರೆತಿದೆ. ಒಟ್ಟು 15 ಮಂದಿ ಲಿಂಗಾಯತ ಶಾಸಕರು ಇದ್ದಾರೆ ಎನ್ನಲಾಗಿದೆ.

ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ?

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಬೈರತಿ ಸುರೇಶ್ ವಿರುದ್ಧ ಲಿಂಗಾಯತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೈರತಿ ಸುರೇಶ್ ಸರ್ಕಾರದಲ್ಲಿ ಸೂಪರ್ ಸಿಎಂ ರೀತಿ ವರ್ತನೆ ಮಾಡುತ್ತಿದ್ದಾರೆ. ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದರೂ ಸಚಿವರ ಹಸ್ತಕ್ಷೇಪ ಹೆಚ್ಚಾಗಿದೆ. ಸಿಎಂ ಅವರ ಕಾರ್ಯಗಳಿಗೂ ಮೂಗು ತೂರಿಸುತ್ತಾರೆ ಎಂದು ದೂರು ನೀಡಲು ಶಾಸಕರ ನಿಯೋಗ ಮುಂದಾಗಿದೆ.

ಎರಡನೇಯದ್ದಾಗಿ, ಪಕ್ಷ ಸಂಘಟನೆಯಲ್ಲಿ ಲಿಂಗಾಯತರಿಗೆ ಅವಕಾಶ ದೊರೆಯಬೇಕು. ಕಾಂಗ್ರೆಸ್ ಪಕ್ಷದೊಳಗೆ ಪಕ್ಷ ಸಂಘಟನೆ ಜವಾಬ್ದಾರಿ ಲಿಂಗಾಯತರಿಗೆ ಕೊಡಬೇಕು ಎಂಬ ಬೇಡಿಕೆಯನ್ನು ನಿಯೋಗ ಹೈಕಮಾಂಡ್ ಮುಂದಿಡಲಿದೆ ಎನ್ನಲಾಗಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನ ನೇಮಿಸಬೇಕು ಎಂದು ಪರೋಕ್ಷವಾಗಿ ಆಗ್ರಹಿಸಲಿದೆ.

ಪಕ್ಷ ಸಂಘಟನೆಯಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಬೇಕು. ಅಧ್ಯಕ್ಷ ಸ್ಥಾನ ಬದಲಾವಣೆ ವೇಳೆ ಲಿಂಗಾಯತ ನಾಯಕರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಲಿಂಗಾಯತ ಸಮುದಾಯ ಮತ್ತೆ ಕಾಂಗ್ರೆಸ್​​ನಿಂದ ದೂರವಾಗುವ ಸ್ಥಿತಿ ಬರುತ್ತಿದೆ. ಅದನ್ನು ಸರಿಪಡಿಸಿ ಎಂದು ಹೈಕಮಾಂಡ್ ಮುಂದೆ ಶಾಸಕರ ನಿಯೋಗ ಆಗ್ರಹಿಸಲಿದೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಜೋರಾಗುತ್ತಿದೆ ಡಿಸಿಎಂ ಫೈಟ್: ಶೀಘ್ರದಲ್ಲೇ ದೆಹಲಿಗೆ ಕಾಂಗ್ರೆಸ್ ನಾಯಕರು

ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿಸುವ ಬಗ್ಗೆ ಸಚಿವ ಕೆಎನ್​ ರಾಜಣ್ಣ ಹೇಳಿಕೆ ನೀಡಿದ ಬೆನ್ನಲ್ಲೇ ಆ ಬಗ್ಗೆ ಒಬ್ಬೊಬ್ಬರಾಗಿ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಕೆಲವು ಮಂದಿ ನಾಯಕರು ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದೂ ಈಗಾಗಲೇ ವರದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ