AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ನಲ್ಲಿ ಜೋರಾಗುತ್ತಿದೆ ಡಿಸಿಎಂ ಫೈಟ್: ಶೀಘ್ರದಲ್ಲೇ ದೆಹಲಿಗೆ ಕಾಂಗ್ರೆಸ್ ನಾಯಕರು

ಕರ್ನಾಟಕ ಕಾಂಗ್ರೆಸ್​​ನಲ್ಲಿ ಡಿಸಿಎಂ ಹುದ್ದೆ ಹೆಚ್ಚಿಸುವ ಬಗ್ಗೆ ಚರ್ಚೆ ಮತ್ತೆ ಜೋರಾಗಿದೆ. ಇದಕ್ಕೆ ಸಚಿವ ಕೆಎನ್ ರಾಜಣ್ಣ ಹೇಳಿಕೆ ಪುಷ್ಟಿ ನೀಡಿದೆ. ಈ ಮಧ್ಯೆ, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ರಾಜಣ್ಣ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್​ನಲ್ಲಿ ಜೋರಾಗುತ್ತಿದೆ ಡಿಸಿಎಂ ಫೈಟ್: ಶೀಘ್ರದಲ್ಲೇ ದೆಹಲಿಗೆ ಕಾಂಗ್ರೆಸ್ ನಾಯಕರು
ಕೆಎನ್ ರಾಜಣ್ಣ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ
Pramod Shastri G
| Edited By: |

Updated on: Jun 24, 2024 | 1:08 PM

Share

ಬೆಂಗಳೂರು, ಜೂನ್ 24: ಲೋಕಸಭೆ ಚುನಾವಣೆ, ಪರಿಷತ್ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಕರ್ನಾಟಕ ಕಾಂಗ್ರೆಸ್​ನಲ್ಲಿ (Karnataka Congress) ಡಿಸಿಎಂ ಫೈಟ್ ಜೋರಾಗಲು ಶುರುವಾಗಿದೆ. ಹೆಚ್ಚಿನ ಡಿಸಿಎಂ (DCM) ಹುದ್ದೆ ಸೃಷ್ಟಿಸುವ ಬಗ್ಗೆ ಸಚಿವ ಕೆಎನ್​ ರಾಜಣ್ಣ (KN Rajanna) ಹೇಳಿಕೆ ನೀಡಿದ ಬೆನ್ನಲ್ಲೇ ಒಬ್ಬೊಬ್ಬರಾಗಿ ಕಾಂಗ್ರೆಸ್ (Congress) ನಾಯಕರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಜತೆಗೆ, ಕಾಂಗ್ರೆಸ್ ನಾಯಕರು ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ. ಇತರ ನಾಯಕರೂ ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಇದೆ. ಡಿಸಿಎಂ ಹುದ್ದೆ ವಿಚಾರವಾಗಿ ಲೋಕಸಭೆ ಚುನಾವಣೆ ಬಳಿಕ ಚರ್ಚಿಸೋಣ ಎಂದು ವರಿಷ್ಠರು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವರಿಷ್ಠರ ಭೇಟಿಗೆ ಸತೀಶ್​ ಹಾಗೂ ಬಣ ಯತ್ನಿಸುತ್ತಿದೆ.

ಈ ಮಧ್ಯೆ, ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ರಾಜಣ್ಣ ಹೇಳಿಕೆ‌ಗೆ ಸೋಮವಾರ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವರಿಷ್ಠರ ಬಳಿ ಹೋಗಿ ಕೇಳಲಿ, ಯಾರೂ ಬೇಡ ಅಂದಿಲ್ಲ. ಸಿಎಂ ಹುದ್ದೆಯನ್ನೂ ಕೇಳಲಿ, ಯಾರು ಬೇಡ ಅಂದವರು ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ಡಿಸಿಎಂ ಮಾಡುವುದರಿಂದ ಎಲ್ಲವೂ ಸರಿಯಾಗುತ್ತದೆ ಎನ್ನುವುದಾದರೆ ಸಿಎಂ ಒಬ್ಬರನ್ನು ಬಿಟ್ಟು‌ ಇಡೀ ಸಂಪುಟ ಡಿಸಿಎಂ ಆಗಲಿ. ಹಾಗೆ ಮಾಡಲು ಆಗುತ್ತಾ? ನಮ್ಮ ಕೆಲಸ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ನಮಗೆ 4-5 ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಣ್ಣ ಹೇಳಿಕೆ ವೈಯಕ್ತಿಕ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಏನು ಹೇಳಿದ್ದರು ರಾಜಣ್ಣ?

ಬಾಪೂಜಿ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಪ್ರಧಾನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ರಾಜಣ್ಣ, ನಾಯಕರನ್ನು ನಿರ್ಲಕ್ಷಿಸಿದರೆ ವಿವಿಧ ಸಮುದಾಯಗಳ ಜನರು ಪಕ್ಷದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ. ಒಂದು ವರ್ಗದ ಜನರು ಮಾತ್ರ ಅಧಿಕಾರವನ್ನು ಉಳಿಸಿಕೊಂಡರೆ, ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತಿರುವವರು ಪಕ್ಷವು ಅಧಿಕಾರದಿಂದ ಹೊರಗಿರುವಾಗ ದೂರ ಹೋಗಬಹುದು. ಆ ಹಿನ್ನೆಲೆಯಲ್ಲಿ ಹೆಚ್ಚಿನ ಡಿಸಿಎಂ ಹುದ್ದೆಗಳ ಅಗತ್ಯವನ್ನು ಪ್ರತಿಪಾದಿಸುತ್ತಿದ್ದೇನೆ ಎಂದಿದ್ದರು.

ಇದನ್ನೂ ಓದಿ: ಸಾಹಿತಿಗಳೂ ರಾಜಕಾರಣಿಗಳೇ: ಡಿಕೆ ಶಿವಕುಮಾರ್​ ಹೇಳಿಕೆಗೆ ಪ್ರಗತಿಪರರ ಆಕ್ರೋಶ, ಸಿಎಂಗೆ ಪತ್ರ

ಲಿಂಗಾಯತ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಶಾಸಕರು ತಲಾ ಒಂದು ಡಿಸಿಎಂ ಹುದ್ದೆಯನ್ನು ಹೊಂದಬೇಕು ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ