ಆರ್​ಎಸ್​ಎಸ್​ ಚಡ್ಡಿ ಸುಡುವ ಫೋಟೋ ಹಂಚಿಕೊಂಡ ಕಾಂಗ್ರೆಸ್; ತೇಜಸ್ವಿ ಸೂರ್ಯರಿಂದ ತೀಕ್ಷ್ಣ ಪ್ರತಿಕ್ರಿಯೆ

| Updated By: Rakesh Nayak Manchi

Updated on: Sep 12, 2022 | 2:29 PM

ಆರ್​ಎಸ್​ಎಸ್​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಕಾಂಗ್ರೆಸ್ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನು ನೀಡಿದರು.

ಆರ್​ಎಸ್​ಎಸ್​ ಚಡ್ಡಿ ಸುಡುವ ಫೋಟೋ ಹಂಚಿಕೊಂಡ ಕಾಂಗ್ರೆಸ್; ತೇಜಸ್ವಿ ಸೂರ್ಯರಿಂದ ತೀಕ್ಷ್ಣ ಪ್ರತಿಕ್ರಿಯೆ
ಆರ್​ಎಸ್​ಎಸ್​ ಚಡ್ಡಿ ಸುಡುವ ಫೋಟೋ ಹಂಚಿಕೊಂಡ ಕಾಂಗ್ರೆಸ್; ತೇಜಸ್ವಿ ಸೂರ್ಯರಿಂದ ತೀಕ್ಷ್ಣ ಪ್ರತಿಕ್ರಿಯೆ
Follow us on

ಭಾರತ್ ಜೋಡೋ ಯಾತ್ರೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಬಿಜೆಪಿಯನ್ನು ಟೀಕಿಸಿದೆ. ಆರ್​ಎಸ್​ಎಸ್​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಹಂಚಿಕೊಂಡು “ಬಿಜೆಪಿ ಮತ್ತು ಆರ್​ಎಸ್​ಎಸ್​ ಮಾಡಿದ ಹಾನಿಯನ್ನು ಸರಿಪಡಿಸಲು ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗಿದೆ” ಎಂದು ಟೀಕಿಸಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ, ಚಡ್ಡಿ ಸುಡುವುದನ್ನು ಕಾಂಗ್ರೆಸ್ ನಾಶಕ್ಕೆ ಹೋಲಿಕೆ ಮಾಡಿದ್ದಾರೆ.

ಆರ್​ಎಸ್​ಎಸ್​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕಾಂಗ್ರೆಸ್, ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ, ಆರ್​ಎಸ್​ಎಸ್​ ಮಾಡಿದ ಹಾನಿಯನ್ನು ಸರಿಪಡಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ಹೇಳಿಕೊಂಡಿದೆ.

ಕಾಂಗ್ರೆಸ್​ನ ಟೀಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ಅವರು ಫೋಟೋವನ್ನು ಕಾಂಗ್ರೆಸ್ ರಾಯಕೀಯದ ಸಂಕೇತವೆಂದು ಹೇಳಿ ಕಾಂಗ್ರೆಸ್ ಪಕ್ಷದ ನಾಶದ ಬಗ್ಗೆ ಟಾಂಗ್ ಕೊಟ್ಟಿದ್ದಾರೆ. “ಈ ಚಿತ್ರವು ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದೆ. ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ. ಈ ಹಿಂದೆ ಅವರು ಹಚ್ಚಿದ ಬೆಂಕಿ ಭಾರತದ ಬಹುತೇಕ ಭಾಗಗಳಲ್ಲಿ ಅವರನ್ನು ಸುಟ್ಟುಹಾಕಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲೂ ಶೀಘ್ರದಲ್ಲೇ ಬೂದಿಯಾಗಲಿದೆ” ಎಂದು ಹೇಳಿದರು.

ಮತ್ತೊಂದು ಟ್ವೀಟ್‌ ಮಾಡಿದ ಸಂಸದರು, 1984ರ ಸಿಖ್ ವಿರೋಧಿ ದಂಗೆ ಮತ್ತು 2002ರ ಗೋಧ್ರಾ ರೈಲು ದಂಗೆ ಪ್ರಕರಣಕ್ಕೆ ಕಾಂಗ್ರೆಸ್ ಪಕ್ಷವನ್ನು ದೂಷಿಸಿದ್ದಾರೆ. “1984 ರಲ್ಲಿ ಕಾಂಗ್ರೆಸ್ ಬೆಂಕಿ ದೆಹಲಿಯನ್ನು ಸುಟ್ಟಿತು. ಅದರ ಪರಿಸರ ವ್ಯವಸ್ಥೆಯು 2002ರಲ್ಲಿ ಗೋಧ್ರಾದಲ್ಲಿ 59 ಕರಸೇವಕರನ್ನು ಜೀವಂತವಾಗಿ ಸುಟ್ಟುಹಾಕಿತು. ಇದೀಗ ಮತ್ತೆ ಅದಕ್ಕೆ ಕರೆ ನೀಡಿದ್ದಾರೆ. ರಾಹುಲ್ ಗಾಂಧಿ ಭಾರತದ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ತೇಜಸ್ವಿ ಸೂರ್ಯ ಟ್ವೀಟ್ ಓದಿದೆ.

ಇನ್ನು, ಕಾಂಗ್ರೆಸ್ ಹಂಚಿಕೊಂಡ ಫೋಟೋವನ್ನು ತೆಗೆದುಹಾಕುವಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಕಾಂಗ್ರೆಸ್ ಅನ್ನು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರಾ, “ಇದು ‘ಭಾರತ್ ಜೋಡೋ ಯಾತ್ರೆ’ ಅಲ್ಲ, ಇದು ‘ಬೆಂಕಿ ಹಚ್ಚಿಸುವ ಯಾತ್ರೆ’. ಕಾಂಗ್ರೆಸ್ ಪಕ್ಷ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ನಾನು ರಾಹುಲ್ ಗಾಂಧಿಯನ್ನು ಕೇಳಲು ಬಯಸುತ್ತೇನೆ, ನಿಮಗೆ ಈ ದೇಶದಲ್ಲಿ ಹಿಂಸೆ ಬೇಕೇ? ಎಂದು ಪ್ರಶ್ನಿಸಿ ಕೂಡಲೇ ಈ ಚಿತ್ರವನ್ನು ತೆಗೆಯಬೇಕು” ಎಂದು ಒತ್ತಾಯಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Mon, 12 September 22