ಬೆಳಗಾವಿ, ಡಿಸೆಂಬರ್ 14: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನ (Winter Session) ಮುಕ್ತಾಯದ ಹಂತದಲ್ಲೂ ಕಾಂಗ್ರೆಸ್ ಸನ್ನದ್ಧ ಸ್ಥಿತಿಯನ್ನು ಹಾಗೇ ಕಾಯ್ದುಕೊಂಡಿದೆ. ಎರಡೇ ವಾರದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕಾಂಗ ಸಭೆ (Congress CLP Meeting) ನಡೆದಿದ್ದು ಕುತೂಹಲದ ಬೆಳವಣಿಗೆಗಳೂ ನಡೆದಿವೆ. ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯಲು ಇನ್ನು ಎರಡೇ ದಿನ ಬಾಕಿ. ಕಳೆದ ವಾರ ವಿಪಕ್ಷಗಳನ್ನು ಎದುರಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ಧತೆ ಮಾಡಿಕೊಂಡಿತ್ತು. ಈ ವಾರ ಸಿದ್ಧತೆಗಳನ್ನು ಹಾಗೇ ಮುಂದಿನ ದಿನಗಳಿಗೂ ಕಾಪಾಡಿಕೊಂಡು ಮುಂದುವರಿಯಲು ಮತ್ತೆ ಶಾಸಕಾಂಗ ಸಭೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ನೇತೃತ್ವದಲ್ಲಿ ಬೆಳಗಾವಿ ಹೊರವಲಯದ ರೆಸಾರ್ಟ್ನಲ್ಲಿ ಶಾಸಕಾಂಗ ಸಭೆ ನಡೆಸಿ ರಣತಂತ್ರ ರೂಪಿಸಲಾಗಿದೆ.
ಲೋಕಸಭೆ ಚುನಾವಣೆ ಗೆಲ್ಲೋದಕ್ಕೆ ಎಲ್ಲರೂ ಸಜ್ಜಾಗಬೇಕು. ನಮ್ಮ ಉಚಿತ ಗ್ಯಾರಂಟಿಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವನ್ನ ಮಾಡಬೇಕು ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಗ್ಯಾರಂಟಿಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾವೇಶ ಮಾಡಿ. ಸಮಾವೇಶ ಮಾಡೋದ್ರ ಮೂಲಕ ಗ್ಯಾರಂಟಿ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಅಂತಾ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಸಚಿವರು ಮತ್ತು ಶಾಸಕರಿಗೆ ಸಿಎಂ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡ ಪ್ರಸಂಗ ನಡೆದಿದೆ. ಶಾಸಕಾಂಗ ಸಭೆಗೆ ಅನಿವಾರ್ಯ ಕಾರಣಕ್ಕೆ ಕೆಲವು ಸಚಿವರು ಗೈರಾಗಿದ್ರು. ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಶರಣು ಪ್ರಕಾಶ್ ಪಾಟೀಲ್, ಜಮೀರ್ ಅಹಮದ್ ಹಾಗೂ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಚಕ್ಕರ್ ಹೊಡೆದಿದ್ದು ಸಿಎಂ ಗರಂ ಆಗಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲೂ ಮತ್ತೆ ದೂರುಗಳ ಸರಮಾಲೆ ಮುಂದುವರಿದಿದೆ. ಮತ್ತೆ ಸಚಿವರ ಮೇಲೆ ದೂರು ಹೇಳಿದ ಬಿ.ಆರ್ ಪಾಟೀಲ್, ಸಚಿವರ ವರ್ತನೆಗಳು ಬದಲಾಗಿಲ್ಲ ಎಂದು ದೂರಿದ್ದಾರೆ. ಅಧಿಕಾರಿಗಳ ಮೇಲೆ ದೂರು ಹೇಳಿದ ಕೆಲ ಶಾಸಕರು, ಶಾಸಕರ ಮನವಿಗಳನ್ನ ಅಧಿಕಾರಿಗಳು ಸೀರಿಯಸ್ ಆಗಿ ಪರಿಗಣಿಸುವುದಿಲ್ಲ. ಶಾಸಕರನ್ನ ಅಸಡ್ಡೆಯಿಂದ ನೋಡ್ತಾರೆ ಎಂದು ದೂರಿದ್ದಾರೆ. ಸಚಿವರು ಈ ಬಗ್ಗೆ ಗಮನಹರಿಸಲಿ, ಸಚಿವರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮುಸಲ್ಮಾನರೇ, ವಿವಾದತ್ಮಕ ಹೇಳಿಕೆ ನೀಡಿದ ಈಶ್ವರಪ್ಪ!
ಬಿಜೆಪಿಯ ಶಾಸಕರಿಬ್ಬರು ಕಾಂಗ್ರೆಸ್ ಶಾಸಕಾಂಗ ಸಭೆಯ ಡಿನ್ನರ್ನಲ್ಲಿ ಭಾಗಿ ಆಗಿದ್ದರು. ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಶಾಸಕರಿಗೆ ಭೋಜನಕೂಟ ಏರ್ಪಾಟು ಮಾಡಿದ್ದರು. ಭೋಜನಕೂಟಕ್ಕೆ ಅಧಿಕೃತವಾಗಿ ಬಿಜೆಪಿಯ ಎಂಎಲ್ಸಿ ಹೆಚ್.ವಿಶ್ವನಾಥ್, ಶಾಸಕರಾದ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಭಾಗಿಯಾಗಿದ್ದು ಕುತೂಹಲ ಮೂಡಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ