ಬೆಳಗಾವಿ ಸದನದಲ್ಲೂ ಪ್ರತಿಧ್ವನಿಸಿದ ಲೋಕಸಭಾ ಭದ್ರತಾ ಲೋಪ, ಕಾಂಗ್ರೆಸ್ ಎಂಪಿ ಪಾಸ್ ಕೊಟ್ಟಿದ್ರೆ ಏನಾಗ್ತಿತ್ತು?
ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ ಪ್ರಕರಣ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಪ್ರತಿಧ್ವನಿಸಿದ್ದು, ಈ ವಿಷಯ ಆಡಳಿ ಹಾಗೂ ವಿಪಕ್ಷ ನಾಯಕರ ಗದ್ದಲಕ್ಕೆ ಕಾರಣವಾಗಿದೆ. ಹಾಗಾದ್ರೆ, ಯಾರೆಲ್ಲ ಏನೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಳಗಾವಿ, (ಡಿಸೆಂಬರ್ 13): ಸಂಸತ್ ಕಲಾಪದಲ್ಲಿ ಭದ್ರತಾ ಲೋಪ ಪ್ರಕರಣ(Security Breach in Lok Sabha) ಇತ್ತ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ (Belagavi Winter Session) ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮೊದಲಿಗೆ ಸುವರ್ಣ ಸೌಧದಲ್ಲಿ ಈ ವಿಷಯವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಪ್ರಸ್ತಾಪ ಮಾಡಿದ್ದು, ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕೊಟ್ಟ ಪಾಸ್‌ನಿಂದಲೇ ಈ ರೀತಿಯಾಗಿದೆ. ಹೀಗಾಗಿ ಅವರಿಗೆ ಸ್ವಲ್ಪ ಬುದ್ಧಿವಾದ ಹೇಳಿ ಎಂದಿದ್ದಾರೆ. ಈ ರೀತಿ ಹೇಳುತ್ತಿದ್ದಂತೆಯೇ ಇತ್ತ ವಿಪಕ್ಷ ನಾಯಕ ಆರ್ ಅಶೋಕ್ (Opposition leader R Ashok) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಹೀಗೆಲ್ಲ ಮಾತನಾಡಬೇಡಿ. ಇದು ದೇಶದ ಭದ್ರತೆಯ ವಿಷಯವಾಗಿದೆ ಎಂದು ಕಿಡಿಕಾರಿದರು.
ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿರುವಾಗ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯವರು ಸ್ವಲ್ಪ ಬುದ್ಧಿ ಹೇಳಬೇಕು. ಹೀಗೆ ಎಲ್ಲರಿಗೂ ಪಾಸ್ ಕೊಟ್ಟರೆ ಹೇಗೆ? ಅದು ಕಾಂಗ್ರೆಸ್‌ನವರು ಯಾರಾದರೂ ಪಾಸ್ ಕೊಟ್ಟಿದ್ದರೆ ನೀವು ಸುಮ್ಮನೆ ಇರುತ್ತಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಇದಕ್ಕೆ ಮಧ್ಯ ಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಇದು ದೇಶದ ಭದ್ರತೆಯ ಪ್ರಶ್ನೆಯಾಗಿದೆ. ಈ ವಿಷಯವನ್ನು ನೀವು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಭದ್ರತಾ ಲೋಪ: ಲೋಕಸಭಾ ಸದನದೊಳಗೆ ನುಗ್ಗಿದ್ದು ಮೈಸೂರಿನ ಯುವಕ, ಗಲ್ಲಿಗೇರಿಸಿ ಎಂದ ತಂದೆ
ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಇದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಇದನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಆದರೆ, ಇಂಥ ವಿಚಾರವನ್ನು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಆಗ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅದೇ ನಾವು ಕಾಂಗ್ರೆಸ್‌ನವರು ಪಾಸ್ ಕೊಟ್ಟಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.
ಬೇರೆ ಪಕ್ಷದ ಎಂಪಿ ಪಾಸ್ ಕೊಟ್ಟಿದ್ದರೆ ಬಿಜೆಪಿಯವರು ಏನು ಮಾಡ್ತಿದ್ದರು ಎಂದು ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಪ್ರಶ್ನಿಸಿದ್ದಾರೆ. ಅಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಇದೇ ರೀತಿಯಾಗಿ ಪ್ರಶ್ನಿಸಿದ್ದು, ಪಾಸ್ ಕೊಟ್ಟ ಸಂಸದರಿಗೆ ಜವಾಬ್ದಾರಿ ಇಲ್ವಾ ಎಂದರು. ಈ ವೇಳೆ ಆಡಳಿತ, ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Wed, 13 December 23