ಭದ್ರತಾ ಲೋಪ: ಲೋಕಸಭಾ ಸದನದೊಳಗೆ ನುಗ್ಗಿದ್ದು ಮೈಸೂರಿನ ಯುವಕ, ಗಲ್ಲಿಗೇರಿಸಿ ಎಂದ ತಂದೆ
Security Breach in Parliament: ಲೋಕಸಭಾ ಸದನ ನಡೆಯುತ್ತಿರು ವೇಳೆ ಇಬ್ಬರು ಯುವಕರು ನುಗ್ಗಿ ಬಂಂದಿದ್ದು, ಓರ್ವನನ್ನು ಸಾಗರ್ ಮತ್ತೋರ್ವನನ್ನು ಮನೋರಂಜನೆ ಎಂದು ಗುರುತಿಸಲಾಗಿದೆ. ಮನೋರಂಜನ್ ಮೂಲತಃ ಮೈಸೂರಿನವನಾಗಿದ್ದಾನೆ. ಇನ್ನು ಮಗನ ಈ ಕೃತ್ಯಕ್ಕೆ ತಂದೆ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಮೈಸೂರು.ನವದೆಹಲಿ, (ಡಿಸೆಂಬರ್ 13): ಲೋಕಸಭಾ ಕಲಾಪ ನಡೆಯುತ್ತಿರುವ ವೇಳೆ ಏಕಾಏಕಿ ಇಬ್ಬರು ಯುವರು ನುಗ್ಗಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಕುರ್ಚಿಯತ್ತ ಓಡಿ ಹೋಗಿದ್ದಾರೆ. ಸದನದೊಳಗೆ ನುಗ್ಗಿದ ಯುವಕರನ್ನು ಸಾಗರ್ ಹಾಗೂ ಮನೋರಂಜನ್ ಎಂದು ಗುರುತಿಸಲಾಗಿದ್ದು, ಮನೋರಂಜನ್ ಮೈಸೂರು ಮೂಲದವನು ಎಂದು ತಿಳಿದುಬಂದಿದೆ. ಇನ್ನು ಇತ್ತ ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಟಿವಿ9ಗೆ ಮನೋರಂಜನ್ ಅವರ ತಂದೆ ದೇವರಾಜೇಗೌಡ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮನೋರಂಜನ್ ಬಿಇ ಮುಗಿಸಿದ್ದ, ನನ್ನ ಮಗನಿಗೆ ಬಿಇ ಸೀಟ್ ಕೊಡಿಸಿದ್ದು ಹೆಚ್.ಡಿ.ದೇವೇಗೌಡರು. ದೆಹಲಿ, ಬೆಂಗಳೂರಿಗೆ ಓಡಾಡುತ್ತಿದ್ದ. ಆದರೆ ಪುತ್ರ ಮನೋರಂಜನ್ ಎಲ್ಲಿಗೆ ಹೋಗಿದ್ದಾನೆಂದು ಗೊತ್ತಿಲ್ಲ. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ನನ್ನ ಪುತ್ರ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲ. ಸಮಾಜದಲ್ಲಿ ಅನ್ಯಾಯ ಮಾಡಿದ್ದಾನೆ ಅಂದ್ರೆ ಅವನು ಮಗನೇ ಅಲ್ಲ. ಆತ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಎಂದರು.
ಪ್ರತ್ಯಕ್ಷದರ್ಶಿ ಮೋಹನ್ ದಾನಪ್ಪ ಹೇಳಿದ್ದೇನು?
ಇನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪ್ರತ್ಯಕ್ಷದರ್ಶಿ ಮೋಹನ್ ದಾನಪ್ಪ ಎನ್ನುವರು ಟಿವಿ9ಗೆ ಪ್ರತಿಕ್ರಿಯಿಸಿದ್ದು, ಲೋಕಸಭೆ ಕಲಾಪವನ್ನು ನೋಡಲು ನಾವು ಬಂದಿದ್ದೆವು. ನಾವು ಮೊದಲ ಗ್ಯಾಲರಿಯಲ್ಲಿದ್ದೆವು, ಅವನು ಗ್ಯಾಲರಿ 2ರಲ್ಲಿ ಇದ್ದ. ಗ್ಯಾಲರಿಯಿಂದ ಏಕಾಏಕಿ ಸದನಕ್ಕೆ ಜಿಗಿದು ಕಲರ್ ಸ್ಪ್ರೇ ಮಾಡಿದ್ದಾನೆ. ಬಲಗಾಲಿನ ಶೂನಿಂದ ತೆಗೆದು ಹಳದಿ ಕಲರ್ ಸ್ಪ್ರೇ ಮಾಡಿದ್ದು, ಆ ವೇಳೆ ಕೆಲ ಸಂಸದರು ಹಿಡಿದಿದ್ದಾರೆ. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು ಎಂದಿದ್ದಾರೆ.
ಇನ್ನು ಇವರಿಬ್ಬರಲ್ಲಿ ಒಬ್ಬರು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿಯಿಂದ ಪಾಸ್ ಪಡೆದುಕೊಂಡು ಸಂಸತ್ತಿನೊಳಗೆ ಬಂದಿದ್ದರು. ಆದ್ರೆ, ಈ ರೀತಿ ಏಕೆ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ