AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಭಾಗಿ, ಒಗ್ಗಟ್ಟಿನ ಮಂತ್ರ ಜಪ: ಯತ್ನಾಳ್, ಜಾರಕಿಹೊಳಿ ಗೈರು

ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದು, ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಯತ್ನಾಳ್, ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ. ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ.

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಭಾಗಿ, ಒಗ್ಗಟ್ಟಿನ ಮಂತ್ರ ಜಪ: ಯತ್ನಾಳ್, ಜಾರಕಿಹೊಳಿ ಗೈರು
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಭಾಗಿ, ಯತ್ನಾಳ್, ಜಾರಕಿಹೊಳಿ ಗೈರು
ಕಿರಣ್​ ಹನಿಯಡ್ಕ
| Edited By: |

Updated on: Dec 12, 2023 | 10:40 PM

Share

ಬೆಳಗಾವಿ, ಡಿ.12: ಜಿಲ್ಲೆಯ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (BS Yediyurappa) ಭಾಗಿಯಾಗಿದ್ದು, ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್​ಸಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಭಾಗಿಯಾದರು. ಆದರೆ, ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಬಿ.ವೈ. ವಿಜಯೇಂದ್ರ, ಬಿಎಸ್ ಯಡಿಯೂರಪ್ಪ, ಆರ್. ಅಶೋಕ್ ಅವರು ಮಾತ್ರ ಭಾಷಣ ಮಾಡಿದ್ದಾರೆ.

ಒಗ್ಗಟ್ಟಿನ ಮಂತ್ರ ಪಠಿಸಿದ ವಿಜಯೇಂದ್ರ

ಎಲ್ಲ ಶಾಸಕರು ಕೂಡ ನನಗೆ ಉತ್ತಮವಾಗಿ ಸಹಕಾರ ಕೊಡುತ್ತಿದ್ದೀರಿ. ಎಲ್ಲರೂ ಹೀಗೆ ಒಗ್ಗಟ್ಟಾಗಿ ಹೋಗೋಣ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಮ್ಮಲ್ಲಿ ಏನೇ ವ್ಯತ್ಯಾಸಗಳಿದ್ದರೂ ಪಕ್ಷದ ಒಳಗೆ ಚರ್ಚೆ ಮಾಡೋಣ. ಪಕ್ಷದ ವೇದಿಕೆಯ ಹೊರಗೆ ಚರ್ಚಿಸುವುದು ಬೇಡ ಎಂದು ಸೂಚಿಸಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರಕ್ಕೆ ಬಂದರೆ ನನಗೆ ಪಕ್ಷಗಳು ನಗಣ್ಯ: ಬಸನಗೌಡ ಪಾಟೀಲ್ ಯತ್ನಾಳ್

ಮೈತ್ರಿ ಹಿನ್ನೆಲೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕು. ಈಗ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವುದರಿಂದ ಈಗ ಮತ್ತಷ್ಟು ಬೂಸ್ಟ್ ಸಿಕ್ಕಿದೆ ಎಂದರು.

ಬೆಳಗಾವಿಯಲ್ಲಿ ಮೊದಲ ಬಾರಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ. ನಾಳೆ ನಡೆಯುವ ಪ್ರತಿಭಟನೆಯಲ್ಲಿ 7-8 ಸಾವಿರ ಜನ ಸೇರಬಹುದು. ನಾಳೆ ಸಂಜೆ 4.30ಕ್ಕೆ ಸದನದಿಂದ ಹೊರಟು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ವಿಜಯೇಂದ್ರ ಅವರು ಶಾಸಕರಿಗೆ ಸೂಚಿಸಿದರು.

ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ: ಆರ್. ಅಶೋಕ್

ನಾವೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಕೆಲವು ಮಂತ್ರಿಗಳಿಗೆ ಕೊಬ್ಬು ಇದೆ. ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದು ತೋರಿಸಿ ಅವರ ಕೊಬ್ಬು ಇಳಿಸಬೇಕಿದೆ. ಎಲ್ಲರೂ ಗಂಭೀರವಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ ಎಂದರು.

ಪಕ್ಷಕ್ಕೆ ಒಳ್ಳೆಯದಾಗುವುದಿದ್ದರೆ ಮಾಧ್ಯಮಗಳ ಜೊತೆ ಮಾತನಾಡಿ. ಇಲ್ಲವಾದರೆ ಏನೂ ಮಾತಾಡಬೇಡಿ. ನಾವೆಲ್ಲರೂ ಸೇರಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡೋಣ ಎಂದರು.

ಮುಸ್ಲಿಂ ಸಮಾಜಕ್ಕೆ 10 ಸಾವಿರ ಕೋಟಿ ಕೊಡುವವರು ರೈತರಿಗೆ ಯಾಕೆ ಹಣ ಕೊಡಲ್ಲ ಎಂಬ ಬಗ್ಗೆ ಪ್ರಶ್ನೆ ಮಾಡಿ. ಸಣ್ಣ ಪುಟ್ಟ ವ್ಯತ್ಯಾಸ ಸರಿಪಡಿಸಿ ಕೊಂಡು ಸದನದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದು ಅಶೋಕ್ ಅವರು ಶಾಸಕರಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ನಾನು ನಾಳೆ ಬರಬೇಕಿದ್ದವನು ಇವತ್ತೇ ಬಂದಿದ್ದೇನೆ. ನಾಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ. ನೀವು ಯಾವಾಗ ಎಲ್ಲಿಗೆ ಕರೆದರೂ ಬರಲು ನಾನು ಸಿದ್ಧನಿದ್ದೇನೆ. ಸದನದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ಸರ್ಕಾರವನ್ನು ಎದುರಿಸಿ. ಧರಣಿ, ಸಭಾತ್ಯಾಗದಂತಹ ವಿಷಯಗಳು ಬಂದಾಗ 7-8 ಜನ ಸೇರಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದರು.

ಸಭೆ ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 350ನೇ ವಿಧಿ ವಿಚಾರವಾಗಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದೇವೆ. ನಾಳೆ ಬೆಳಗಾವಿಯಲ್ಲಿ ರೈತರ ಬೃಹತ್ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಬಗ್ಗೆ ಚರ್ಚೆ ಆಯಿತು. ಸಚಿವ ಜಮೀರ್ ಅಹಮದ್ ವಿಚಾರ ಮತ್ತು ರೈತರಿಗೆ ಹಣ ಬಿಡುಗಡೆ ಮಾಡದೇ ಇರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ