Siddaramaiah: ಮಾರ್ಚ್ 17ರಂದು ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷೆ; ಸಿದ್ದರಾಮಯ್ಯ

|

Updated on: Mar 13, 2023 | 10:38 PM

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗಳಿಸಬೇಕು ಎಂಬುದು ಕಾಂಗ್ರೆಸ್ ಗುರಿಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನ ಗೆದ್ದಿದ್ದವು.

Siddaramaiah: ಮಾರ್ಚ್ 17ರಂದು ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷೆ; ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್ 17ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ (Congress) ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗೆಲುವಿನ ಸಾಧ್ಯತೆಯೇ ಅಭ್ಯರ್ಥಿಗಳ ಆಯ್ಕೆಗೆ ಪರಿಗಣಿಸಿದ ಮೊದಲ ಮಾನದಂಡವಾಗಿದೆ. ಮಾರ್ಚ್ 17ರಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯಲಿದ್ದು, ಅಂದೇ ಪಟ್ಟಿ ಪ್ರಕಟವಾಗಬಹುದು ಎಂದು ತಿಳಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಅರ್ಜಿಯನ್ನು ಸ್ಕ್ರೀನಿಂಗ್ ಸಮಿತಿ ಪರಾಮರ್ಶಿಸಿದೆ. ಸ್ಕ್ರೀನಿಂಗ್ ಸಮಿತಿಯ ಅಭಿಪ್ರಾಯವನ್ನು ಶೀಘ್ರದಲ್ಲೇ ಎಐಸಿಸಿಯ ಕೇಂದ್ರ ಚುನಾವಣಾ ಸಮಿತಿಗೆ ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಕೆಲವು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದರು.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗಳಿಸಬೇಕು ಎಂಬುದು ಕಾಂಗ್ರೆಸ್ ಗುರಿಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನ ಗೆದ್ದಿದ್ದವು.

ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ್ದು, 90 ಮಂದಿ ಅಭ್ಯರ್ಥಿಗಳನ್ನು ಹೆಸರಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಇನ್ನಷ್ಟೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ.

ಇದನ್ನೂ ಓದಿ: Karnataka Assembly Poll 2023: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 120 ಕ್ಷೇತ್ರಗಳ ಟಿಕೆಟ್​ ಅಂತಿಮ

ಈ ಮಧ್ಯೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಭರಾಟೆ ತೀವ್ರಗೊಂಡಿದೆ. ಬಿಜೆಪಿಯು ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ ಹಾಗೂ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿವೆ.

ಸಿದ್ಧತೆ ಪರಿಶೀಲನೆ ನಡೆಸಿ ತೆರಳಿರುವ ಕೇಂದ್ರ ಚುನಾವಣಾ ಆಯೋಗ

ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲು ಕಳೆದ ವಾರ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಚುನಾವಣಾ ಆಯೋಗದ ನಿಯೋಗ ಶನಿವಾರವಷ್ಟೇ ಸಿದ್ಧತೆ ಬಗ್ಗೆ ಮಾಹಿತಿ ನೀಡಿ ತೆರಳಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿಕಾಸಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಸಿದ್ಧತೆಗಳ ಮಾಹಿತಿ ನೀಡಿದ್ದರು. ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡುವುದೂ ಸೇರಿದಂತೆ ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದ್ದರು. ಇದೇ ವೇಳೆ, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಎಲ್ಲಿಯೂ, ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಗುಜರಾತ್​​ನಲ್ಲಿ ಬಳಸಿದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಬಾರದು ಎಂದು ಕಾಂಗ್ರೆಸ್ ಮಾಡಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ