ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಣ ಬಡಿದಾಟ: ದಿಲ್ಲಿಯಲ್ಲಿ ರಾಜೀ ಸಂಧಾನ, 50:50 ಫಾರ್ಮುಲಾ

| Updated By: ರಮೇಶ್ ಬಿ. ಜವಳಗೇರಾ

Updated on: Oct 26, 2022 | 4:38 PM

ಕರ್ನಾಟಕ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಮುನಿಸು ಮತ್ತೆ ಹೊರಬಿದ್ದಿದೆ. ಅತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕರ್ನಾಟಕದಿಂದ ಆಂಧ್ರ ಪ್ರದೇಶದತ್ತ ಸಾಗಿದೆ. ಇತ್ತ ಬಂಡೆ-ಟಗರು ಬಣ ಬಡಿದಾಟಕ್ಕೆ ನಿಂತಿದ್ದು, ಈ ಬಗ್ಗೆ ದಿಲ್ಲಿಯಲ್ಲಿ ರಾಜೀ ಪಂಚಾಯಿತಿ ಆಗಿದೆ.

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಣ ಬಡಿದಾಟ: ದಿಲ್ಲಿಯಲ್ಲಿ ರಾಜೀ ಸಂಧಾನ, 50:50 ಫಾರ್ಮುಲಾ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Follow us on

ನವದೆಹಲಿ: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (Siddaramaiah And DK Shivakumar) ತಬ್ಬಿಕೊಳ್ಳುವಂತೆ ರಾಹುಲ್ ಗಾಂಧಿ ಮಾಡಿದ್ದರು. ಚಾಮರಾಜನಗರದಲ್ಲಿ ಸಿದ್ದು ಡಿಕೆ ಕೈ ಹಿಡಿದು ನಗಾರಿ ಬಾರಿಸಿದ್ದರು ಭಾರತ್ ಜೋಡೋ ಯಾತ್ರೆಯಲ್ಲೂ ಸಿದ್ದು- ಡಿಕೆ ಕೈ ಹಿಡಿದು ಜೊತೆ ಜೊತೆಯಲಿ ಸಾಗಿ ಎನ್ನುವ ಸಂದೇಶ ಸಾರಿದ್ದರು. ಆದ್ರೆ, ರಾಹುಲ್ ಗಾಂಧಿ ಜೋಡೋ ಯಾತ್ರೆ ಕರ್ನಾಟಕ(Karnataka) ದಾಟಿ ಆಂಧ್ರಕ್ಕೆ ಹೋಗುವಷ್ಟರಲ್ಲೇ ಸಿದ್ದ-ಡಿಕೆ ಬಣದ ಮಧ್ಯೆ ಮೂಡಿರೋ ಬಿರುಕು ಮತ್ತೆ ಕಾಣಿಸಿಕೊಂಡಿದ್ದು, ಉಭಯ ನಾಯಕರ ನಡುವಿನ ಜಂಗೀ ಕುಸ್ತಿ ದಿಲ್ಲಿ ಮುಟ್ಟಿದೆ.

ಹೌದು….ಸಿದ್ದರಾಮಯ್ಯರ ಹುಟ್ಟಹಬ್ಬನ್ನ ಉತ್ಸವದ ರೀತಿ ಮಾಡಿದ್ದ ಟಗರು ಪಡೆ ಇದೀಗ ತಮ್ಮ ನಾಯಕನ ವರ್ಚಸ್ಸು ಹೆಚ್ಚಿಸುವುದಕ್ಕೆ ಬೀದರ್​ನಿಂದ ಚಾಮರಾಜನಗರವರೆಗೆ ಬಸ್ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಒಬ್ಬರೇ ಬಸ್ ಯಾತ್ರೆ ಮಾಡಿ ಎಲೆಕ್ಷನ್ ವೇಳೆಗೆ ನಾಡಿನಲ್ಲಿ ಮಿಂಚಿನ ಸಂಚಲನ ಎಬ್ಬಿಸಬೇಕು ಅನ್ನೋದು ಸಿದ್ದು ಬಣದ ಪ್ಲ್ಯಾನ್ ಆಗಿದೆ.

ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದು-ಡಿಕೆಶಿ ಜಂಟಿ ಯಾತ್ರೆ; ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ಬಣ ಸೇರಿದಂತೆ ಇತರೆ ಕೆಲ ಹಿರಿಯ ಕೈ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದು ಬಸ್ ಯಾತ್ರೆಗೆ ಸಮನಾಗಿ ಡಿಕೆಶಿ ಬಣವೂ ಸಹ ಬಸ್ ಯಾತ್ರೆ ಕೈಗೊಳ್ಳಲು ತೆರೆ ಮರೆಯಲ್ಲೇ ತಂತ್ರರೂಪಿಸುತ್ತಿದೆ. ಹೀಗಾಗಿ ಚುನಾವಣೆ ಹೊತ್ತಿಗೆ ಎರಡು ಬಣದ ಫೈಟ್ ತಾರಕಕ್ಕೇರಿದ್ದು, ಪಕ್ಷವೇ ಇಬ್ಬರ ಪ್ರವಾಸದ ಪಟ್ಟಿ ತಯಾರಿಸಲಿ ಎಂದು ಹಿರಿಯ ನಾಯಕರು, ಈ ಬಗ್ಗೆ ಹೈಕಮಾಂಡ್​ನಿಂದ ಅನುಮತಿ ಪಡೆಯಲು ನವದೆಹಲಿಗೆ ತೆರಳಿದೆ. ಅಂತಿಮವಾಗಿ ದಿಲ್ಲಿಯಲ್ಲಿ ಈ ಬಗ್ಗೆ ರಾಜೀ ಪಂಚಾಯಿತಿ ಆಗಿದೆ.

50:50 ಫಾರ್ಮುಲಾ

ಇಬ್ಬರು ನಾಯಕರ ಬಣ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿರುವ ಕೈಪಡೆಯ ಹಿರಿಯ ನಾಯಕರ ತಂಡ, ಚುನಾವಣೆ ಹೊತ್ತಲ್ಲಿ ಎರಡು ಬಣ ಕಿತ್ತಾಡೋದು ಬೇಡ. ನಾಯಕರೆಲ್ಲ ಒಗ್ಗಟ್ಟಾಗಿ ಯಾತ್ರೆ ಮಾಡಿ, ಇಲ್ಲದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತೆ ಅನ್ನೋ ಸಲಹೆ ಕೊಟ್ಟಿದ್ದಾರಂತೆ. ಈ ಸಂಬಂಧ ನವದೆಹಲಿಯಲ್ಲಿ ಕೆಸಿ ವೇಣುಗೋಪಾಲ್​ ಅವರು ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜತೆ ಸುದೀರ್ಘವಾಗಿ ಸರ್ಚೆ ನಡೆಸಿದ್ದು, 50:50 ಫಾರ್ಮುಲಾ ಬಳಸಲು ಮುಂದಾಗಿದೆ. 28 ಲೋಕಸಭಾ ಪೈಕಿ 14 ಸಿದ್ದರಾಮಯ್ಯ ಮತ್ತು 14 ಡಿಕೆ ಶಿವಕುಮಾರ್ ಪ್ರಚಾರ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಹೈಕಮಾಂಡ್​ ನಿರ್ಧಾರದ ಬಳಿಕ ಯಾತ್ರೆ ಬಗ್ಗೆ ಸ್ಪಷ್ಟತೆ ತಿಳಿಯಲಿದೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಎಷ್ಟು ಹೊಂದಾಣಿಕೆ ಮಾಡಲು ಹೈಕಮಾಂಡ್ ಪ್ರಯತ್ನಿಸುತ್ತಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಉಭಯ ನಾಯಕರ ಮಧ್ಯೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಇದು ಹೈಕಮಾಂಡ್​ಗೆ ದೊಡ್ಡ ತಲೆನೋವಾಗಿಪರಿಣಮಿಸಿದೆ.