ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭ: ಬಹಿರಂಗ ಪ್ರಚಾರ ಅಂತ್ಯ, ಗೆಲುವಿನ ತಂತ್ರ ಹೆಣೆಯುವಲ್ಲಿ ಪಕ್ಷಗಳು ನಿರತ
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಪಾಲಿಕೆ ಆಧಿಕಾರಕ್ಕೆ ಹಣಾಹಣಿ ಏರ್ಪಟ್ಟಿದ್ದರೂ ಸಹ ಜೆಡಿಎಸ್ ಎಎಪಿ ಹಾಗೂ ಎಐಎಂಐಎಂ ಪಕ್ಷಗಳು ಸಹ ನಿರ್ಣಾಯಕ ವಹಿಸಿವೆ. ಕೊನೆಯ ಕಸರತ್ತು ಎಂಬಂತೆ ಮನೆ ಮನೆ ಪ್ರಚಾರದಲ್ಲಿ ನಿರತರಾಗಿದ್ದರು.
ವಿಜಯಪುರ: ನಗರದಲ್ಲಿ ಸದ್ಯ ಮಹಾನಗರ ಪಾಲಿಕೆಯ ಚುನಾವಣೆಯ (Municipal Corporation Elections) ಭರಾಟೆ ಜೋರಾಗಿದೆ. ಬಹಿರಂಗ ಪ್ರಚಾರಕ್ಕೆ ಇಂದು (ಅ.26) ಅಂತಿಮ ತೆರೆ ಬಿದ್ದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಪಾಲಿಕೆ ಆಧಿಕಾರಕ್ಕೆ ಹಣಾಹಣಿ ಏರ್ಪಟ್ಟಿದ್ದರೂ ಸಹ ಜೆಡಿಎಸ್ ಎಎಪಿ ಹಾಗೂ ಎಐಎಂಐಎಂ ಪಕ್ಷಗಳು ಸಹ ನಿರ್ಣಾಯಕ ವಹಿಸಿವೆ. ಕೊನೆಯ ಕಸರತ್ತು ಎಂಬಂತೆ ಮನೆ ಮನೆ ಪ್ರಚಾರದಲ್ಲಿ ನಿರತರಾಗಿದ್ದರು. ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ಕೇಸರಿ ಪಡೆ ಮತಯಾಚಿಸಿದರೆ, ಬಿಜೆಪಿ ಆಡಳಿತ ವಿರೋಧಿ ಅಸ್ತ್ರವನ್ನು ಕೈ ಪಾರ್ಟಿ ಪ್ರಚಾರದ ವಸ್ತುವನ್ನಾಗಿಸಿಕೊಂಡಿತ್ತು. ಪಾಲಿಕೆ ಚುನಾವಣಾ ಗದ್ದಲ ಕುರಿತ ಒಂದು ವರದಿ ಇಲ್ಲಿದೆ. ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದ್ದು, ಚುನಾವಣೆಯ ಕಾವು ಏರಿದೆ. 35 ಸದಸ್ಯ ಬಲದ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬೀಗಲು ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರಾ ನೇರ ಫೈಟ್ ನಡೆಯಲಿದೆ ಈ ಫೈಟ್ನಲ್ಲಿ ಜೆಡಿಎಸ್ ಎಎಪಿ ಹಾಗೂ ಎಐಎಂಐಎಂ ಪ್ರಮುಖ ಪಾತ್ರ ವಹಿಸಲಿವೆ.
ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ಮತಯಾಚನೆ:
35 ವಾರ್ಡ್ಗಳ ಪೈಕಿ ಕಾಂಗ್ರೆಸ್ 35 ವಾರ್ಡ್ಗಳಲ್ಲಿಯೂ ಸ್ಪರ್ಧೆ ಮಾಡಿದೆ. ಮುಸ್ಲೀಂ ಮತದಾತರರು ಹೆಚ್ಚಿರೋ ವಾರ್ಡ್ ಸಂಖ್ಯೆ 20 ಮತ್ತು 27ರಲ್ಲಿ ಬಿಜೆಪಿ ತನ್ನ ಕ್ಯಾಂಡಿಡಿಯೇಟ್ ಹಾಕದೇ 33 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಇನ್ನು ಜೆಡಿಎಸ್ 20 ಸ್ಥಾನ, ಆಮ್ ಆದ್ಮಿ ಪಾರ್ಟಿ 15 ಸ್ಥಾನ, ಎಐಎಂಐಎಂ 4 ಸ್ಥಾನ, ಜನತಾ ಪಾರ್ಟಿ 3 ಸ್ಥಾನ, ಕೆಆರ್ಎಸ್ 3 ಸ್ಥಾನ, ಎಸ್ಡಿಪಿಐ 2 ಸ್ಥಾನ, ಬಿಎಸ್ಪಿ ಸ್ಥಾನ 1 ಹಾಗೂ ಪಕ್ಷೇತರರು 58 ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರೋ ಕಾರಣ ಪ್ರಮಖ ಪಕ್ಷಗಳ ನಾಯಕರು ಹಾಗೂ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಮತದಾರರ ಮನವೋಲಿಕೆಗೆ ಮುಂದಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಈ ವೇಳೆ ಮಾತನಾಡಿದ ಯತ್ನಾಳ ನಗರದ ಜನರು 33 ಸ್ಥಾನಗಳಲ್ಲಿ ನಮಗೆ ಆಶ್ಚರ್ಯಕರವಾಗಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುತ್ತಾರೆ. ಹಿಂದುತ್ವ ಹಾಗೂ ಅಭಿವೃದ್ದಿ ಹೆಸರಲ್ಲಿ ನಾವು ಮತಯಾಚನೆ ಮಾಡಿದ್ದೇವೆ. ಹೆಚ್ಚಿನ ಸ್ಥಾನ ನಮಗೆ ಸಿಗಲಿವೆ ಎಂದು ಹೇಳಿದರು.
20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ:
ಇದರ ಮಧ್ಯೆ ಜೆಡಿಎಸ್ ಸಹ ಬಿರುಸಿನ ಪ್ರಚಾರ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ವತಃ ವಿಜಯಪುರಕ್ಕೆ ಆಗಮಿಸಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರೋ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. 20 ಸ್ಥಾನಗಳಲ್ಲಿ 10 ಸ್ಥಾನಗಳನ್ನಾದರೂ ಗೆದ್ದೇ ಗೆಲ್ಲುತ್ತೇವೆ ಎಂಬ ಲೆಕ್ಕಾಚಾರ ಹಾಕಿದ್ದಾರೆ. ಆಮ್ ಆದ್ಮಿ 15 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರೂ 2 ಸ್ಥಾನಗಳಲ್ಲಿ ಗೆಲ್ಲೋ ಸಾಧ್ಯತೆಯಿದೆ. ನಾಲ್ಕು ವಾರ್ಡ್ಗಳಲ್ಲಿ ಸ್ಪರ್ಧೆ ಮಾಡಿರುವ ಎಐಎಂಐಎಂ ಇತರರ ಲೆಕ್ಕಾಚಾರ ಉಲ್ಟಾ ಮಾಡೋ ಸಾಧ್ಯತೆಯಿದೆ. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ನಿನ್ನೆ (ಅ. 25) ನಗರದಲ್ಲಿ ಪಾದಯಾತ್ರೆ ನಡೆಸಿ ಸಮಾರಂಭ ಆಯೋಜಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ಮಾಡಿದ್ದಾರೆ. ಇನ್ನು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬಳಿಕ ಕಾಂಗ್ರೆಸ್ ಪಕ್ಷವೂ ಸಹ ಆಂತರಿಕ ಸಭೆಯಲ್ಲಿ ನಿರತವಾಗಿದೆ. ಪಾಲಿಕೆ ಚುನಾವಣೆಗೆ ಹೇಗೆಲ್ಲಾ ಪ್ರಚಾರ ಮಾಡಬೇಕೆಂದು ನಾವು ಪ್ಲ್ಯಾನ್ ಮಾಡಿದ್ದೇವೋ ಆದೇ ರೀತಿ ಪ್ರಚಾರವನ್ನು ಮಾಡಿದ್ದೇವೆ. ಇನ್ನು ಟಿಕೆಟ್ ಸಿಗದ ಕಾರಣ ಭಿನ್ನಾಭಿಪ್ರಾಯ ಸ್ವಾಭಾವಿಕ. ಅಸಮಾಧಾನ ಹೊಂದಿದವರನ್ನು ಕರೆಸಿ ಮನವೋಲಿಸಿ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮುಖಂಡರು ಹೇಳಿದ್ದಾರೆ. ಚುನಾವಣೆಯಲ್ಲಿ 20 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರದ್ದು.
ಚುನಾವಣೆಗೆ ಸಕಲ ಸಿದ್ಧತೆ:
ಅಕ್ಟೋಬರ್ 28 ಮತದಾನಕ್ಕೆ ಜಿಲ್ಲಾ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. 3030 ಮತಗಟ್ಟೆಗಳಲ್ಲಿ 35 ವಾರ್ಡ್ಗಳನ್ನು ಹೊಂದಿರೋ ಪಾಲಿಕೆಯ ಚುನಾವಣೆಗೆ 28 ರಂದು ಮತದಾನ ನಡೆಯಲಿದೆ. 3030 ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ, 172 ಸಾಧಾರಣ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 1,46,736 ಪುರುಷರು, 1,47,327 ಮಹಿಳೆಯರು ಹಾಗೂ 110 ಇತರೆ ಮತದಾರರು ಮತದಾನದ ಹಕ್ಕನ್ನು ಪಡೆದಿದ್ದಾರೆ. ಇನ್ನು ಮತದಾನ ನಡೆಯುವ ದಿನ ಮತದಾನದ ವ್ಯಾಪ್ತಿಯಲ್ಲಿ ಜಾತ್ರೆ, ಸಂತೆಗಳನ್ನು ನಿಷೇಧ ಮಾಡಿ ಚುನಾವಣಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆ ಮತದಾನಕ್ಕೆ ಸೂಕ್ತ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಪಾಲಿಕೆ ಆಧಿಕಾರ ಯಾರು ಹಿಡಿಯಬೇಕೆಂಬ ನಿರ್ಧಾರವನ್ನು ಮತದಾರರು ನಿಶ್ಚಯ ಮಾಡಲಿದ್ದಾರೆ.
ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:20 pm, Wed, 26 October 22