ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್​​ ರಾಜಕಾರಣ ಮಾಡ್ತಿದೆ; ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್​​ ರಾಜಕಾರಣ ಮಾಡುತ್ತಿದೆ, ಒಂದು ಸರ್ಕಾರ ಮಾಡಿದ ನಿರ್ಧಾರವನ್ನು ಮತ್ತೊಂದು ಸರ್ಕಾರ ಪರಿಶೀಲನೆ ಮಾಡದೆ ಪಠ್ಯ ಬದಲು ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.

ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್​​ ರಾಜಕಾರಣ ಮಾಡ್ತಿದೆ; ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ

Updated on: Jun 09, 2023 | 1:53 PM

ಉಡುಪಿ: ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್​​(Congress)ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Srinivas Poojary) ಕಿಡಿಕಾರಿದ್ದಾರೆ. ‘ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಶಾಸನದ ಆಧಾರದಲ್ಲಿ ಸರ್ಕಾರ ನಡೆಯುವುದು. ಒಂದು ಸರ್ಕಾರ ಮಾಡಿದ ನಿರ್ಧಾರವನ್ನು ಮತ್ತೊಂದು ಸರ್ಕಾರ ಪರಿಶೀಲನೆ ಮಾಡದೆ ಪಠ್ಯ ಬದಲು ಮಾಡುವುದು ಸರಿಯಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠ ವಾಪಸ್​ ಖಂಡನಾರ್ಹವಾದದ್ದು, 2009ರಲ್ಲಿ ಯುಪಿಎ ಸರ್ಕಾರ ಬನ್ನಂಜೆ ಅವರಿಗೆ ಪದ್ಮಶ್ರೀ ನೀಡಿತ್ತು. ಇನ್ನು ಹೆಡ್ಗೇವಾರ್ ಪಾಠ, ಚಕ್ರವರ್ತಿ ಸೂಲಿಬೆಲೆ ಪಾಠ ವಾಪಸ್ ಪಡೆಯುವುದಾಗಿ ಸರ್ಕಾರ ಹೇಳಿದೆ. ಈ ಮೂಲಕ ವೈಚಾರಿಕ ವಿಚಾರದ ಮೇಲೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

ಈ ವರ್ಷವೇ ಪಠ್ಯ ಪರಿಷ್ಕರಣೆ: ಎಲ್ಲಾ ಗೊಂದಗಳಿಗೆ ತೆರೆ ಎಳೆದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಒಂದೆಡೆ ಶಾಲಾ ಪಠ್ಯ ಪರಿಷ್ಕರಣೆ ಫೈಟ್ ಜೋರಾಗಿದ್ರೆ, ಮತ್ತೊಂದಡೆ ಪಠ್ಯ ಪರಿಷ್ಕರಣೆಯಿಂದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಿಂದೆ ಸರಿದಿದ್ದರು. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷತೆಗೆ ಬರಗೂರು ತಿರಸ್ಕಾರ ಮಾಡಿದ್ದು, ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿಲ್ಲ ಎಂದಿದ್ದರು. ಆದರೂ ಈ ವರ್ಷವೇ ಪಠ್ಯ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

ಬೆಂಗಳೂರಿನಲ್ಲಿ ನಿನ್ನೆ(ಜೂನ್ 08) ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಮಧು ಬಂಗಾರಪ್ಪ, ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗುತ್ತೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡುತ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರುತ್ತಿವೆ. ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ಸಿಎಂ ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ ಎಂದು ಮಾಹಿತಿ ನೀಡಿದ್ದರು.

ಸರ್ಕಾರದ ಮಟ್ಟದಲ್ಲಿ ಪಠ್ಯಗಳಿಗೆ ಕತ್ತರಿ

ಈ ಬಾರಿಯ ಶಾಲೆಗಳ ಆರಂಭದ ಜೊತೆಗೆ ಪಠ್ಯ ಪರಿಷ್ಕರಣೆ ಜಟಾಪಟಿ ಶುರುವಾಗಿದ್ದು, ಕಳೆದ ಬಾರಿ ಸಾಕಷ್ಟು ವಿರೋಧದ ನಡುವೆ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿತ್ತು.‌ ಹಲವು ಸಾಹಿತಿಗಳ ಬರೆದ ಪಠ್ಯವನ್ನು ತೆಗೆದು ಹಾಕಿದಕ್ಕೆ ಕೆಲ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು, ಇದೀಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಸಾಹಿತಿಗಳು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಈ ಹಿಂದೆ ಬಿಜೆಪಿ ಸರ್ಕಾರ ವೇಳೆ ರೋಹಿತ್ ಚಕ್ರತೀರ್ಥ ಸಮಿತಿ ರಚನೆ ಮಾಡಿರುವ ಪಠ್ಯವನ್ನು ಕೈಬಿಡಬೇಕು. ಪಠ್ಯ ಬದಲಾವಣೆ ಮಾಡ್ಬೇಕೆಂದು ಸಮಾನ ಮನಸ್ಕರ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಡಾ.ಎಸ್.ಜಿ ಸಿದ್ದರಾಮಯ್ಯ ನೇತೃತ್ವದಲ್ಲಿ 20 ಸಾಹಿತಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ:NCERT Textbook Controversy: ಶಾಲಾ ಪಠ್ಯಪುಸ್ತಕದಲ್ಲಿ ಮೊಘಲರ ಅಧ್ಯಾಯವನ್ನು ಕೈಬಿಟ್ಟ NCERT; ಸ್ಪಷ್ಟನೆ ನೀಡಿದ ಅಧಿಕಾರಿ

ಒಟ್ಟಿನಲ್ಲಿ ಶಾಲೆ ಆರಂಭವಾಗ್ತಿದ್ದಂತೆ ಪಠ್ಯ ಪುಸ್ತಕ ಪರುಷ್ಕರಣೆ ಸಮಿತಿ ಅಧ್ಯಕ್ಷರಾಗಲು ಸಾಹಿತಿ ಬರಗೂರು ನಿರಾಕರಿಸಿದ್ದು, ಇದರ ಮಧ್ಯೆ ಇದೇ ವರ್ಷ ಪಠ್ಯ ಪರಿಷ್ಕರಣೆಗೆ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಇದೀಗ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್​ ನಡೆಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Fri, 9 June 23