ಕೋಲಾರ, ಜುಲೈ 26: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ (S Muniswamy) ತೀವ್ರ ವಾಗ್ದಾಳಿ ಮಾಡಿದ್ದಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂಬಂಧ ತನ್ವೀರ್ ಸೇಠ್ ಪತ್ರ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್ ಪಡೆದಿಲ್ಲ. ಆದರೆ ದೇಶವಿರೋಧಿ ಕೃತ್ಯವೆಸಗಿದವರ ಕೇಸ್ ವಾಪಸ್ಗೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅವರದ್ದೇ ಪಕ್ಷದ ಶಾಸಕರ ಕೊಲೆಮಾಡಲು ಪ್ರಯತ್ನ ನಡೆದಿತ್ತು. ಕಾಂಗ್ರೆಸ್ ಪಕ್ಷ ದೇಶವಿರೋಧಿ ಚಟುವಟಿಕೆ ನಡೆಸಿದವರ ಪರವಿದೆ. ಬೆಂಕಿ ಹಚ್ಚಿ, ಗಲಭೆ ನಡೆಸಿದವರ ರಕ್ಷಣೆಗೆ ಮುಂದಾಗಿದ್ದು ನಾಚಿಕೆಗೇಡು. ಶಾಸಕ ತನ್ವೀರ್ ಸೇಠ್ ನೀವು ಭಾರತದಲ್ಲಿ ಜೀವನ ನಡೆಸುತ್ತಿದ್ದೀರಾ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿದಂತೆ ಇತರೆ ಹಿಂಸಾಚಾರ ಪ್ರಕರಣಗಳನ್ನು ಮರು ಪರಿಶೀಲಿಸಿ ಹಿಂಪಡೆಯುವಂತೆ ಸೂಚಿಸಿದ ಗೃಹ ಸಚಿವ
ರಾಜ್ಯ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಡಿಸೆಂಬರ್ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು. ಅವರದ್ದೇ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ
ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಎಂಬ ಬಣಗಳಿವೆ. ಸರ್ಕಾರದಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ಪಕ್ಷದೊಳಗೆ ಬೆಂಕಿ ಹೊತ್ತಿದೆ ಎಂದರು.
UPA ಒಕ್ಕೂಟಕ್ಕೆ INDIA ಕೂಟ ಎಂಬ ಹೆಸರಿಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ಅದೊಂದು ಅಲಿ ಬಾಬಾ ಚಾಲೀಸ್ ಚೋರ್ ಎನ್ನುವ ಒಕ್ಕೂಟ. PFI, SDPI, ಇಂಡಿಯನ್ ಮುಜಾಹಿದ್ದೀನ್ ಇಂತಹ ಉಗ್ರಗ್ರಾಮಿ ಸಂಘಟನೆ ಹೆಸರಲ್ಲಿಯೂ INDIA ಎಂದು ಹಾಕಿಕೊಂಡಿದ್ದಾರೆ.
ದೇಶ ವಿರೋಧಿ ಚಟುವಟಿಕೆ ನಡೆಸುವಾಗ INDIA ಪದ ಉಪಯೋಗಿಸಿದ್ದಾರೆ. INDIA ಕೂಟದ ಸದಸ್ಯರ ತಂಡ ಈ ದೇಶಕ್ಕೆ ಮಾರಕ. ಇವರನ್ನು ಜನರು ನಂಬಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.