ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಎರಡೂ ಪಕ್ಷಗಳು ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಇದೀಗ ಬಿಜೆಪಿಯ ಎಸ್ಟಿ ಸಮಾವೇಶಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳನ್ನು ಗುರಿಯಾಗಿಸಿ ಸಮಾವೇಶಗಳನ್ನು ನಡೆಸಲು ಮುಂದಾಗಿದೆ. ಈ ಮೂರು ಸಮಯದಾಯದ ಮತ ಗಟ್ಟಿಗೊಳಿಸಲು ಯೋಜನೆ ರೂಪಿಸಿದ ಕಾಂಗ್ರೆಸ್, ಸಮಾವೇಶ ಆಯೋಜನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ದಲಿತ ಸಮಾವೇಶ ಆಯೋಜನೆಗೂ ಭರದ ಸಿದ್ಧತೆ ನಡೆಯುತ್ತಿದೆ. ಮೀಸಲಾತಿ ಹೆಚ್ಚಳಕ್ಕೆ ಕೌಂಟರ್ ನೀಡಲು ಪ್ರತ್ಯೇಕ ಎಸ್ಟಿ ಸಮಾವೇಶ ನಡೆಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಟಿ ಸಮಾವೇಶ ಆಯೋಜನೆಗೆ ಕಾಂಗ್ರೆಸ್ ಯೋಜನೆ ಹಾಕಿಕೊಂಡಿದ್ದು, ಆ ಮೂಲಕ ಬಿಜೆಪಿಯ ಎಸ್ಟಿ ಸಮಾವೇಶಕ್ಕೆ ಟಕ್ಕರ್ ನೀಡಲು ಕೈ ನಾಯಕರು ಮುಂದಾಗಿದ್ದಾರೆ. ಮಧ್ಯ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಇದಕ್ಕೂ ಮೊದಲು ಹಿಂದುಳಿದ ವರ್ಗದ ನಾಯಕರ ರಾಜ್ಯ ಪ್ರವಾಸವೂ ನಡೆಯಲಿದ್ದು, ಆ ಮೂಲಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಸಮುದಾಯವನ್ನು ತಲುಪಲು ಕಾಂಗ್ರೆಸ್ ಕಸರತ್ತು ನಡೆಸಲಿದೆ. ಇದರೊಂದಿಗೆ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ದಲಿತ ಸಮಾವೇಶವನ್ನು ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳವಾದ ಬೆನ್ನಲ್ಲೆ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ನ.6ರಂದು ರಾಜ್ಯಮಟ್ಟದ ಬೃಹತ್ ಎಸ್ಟಿ ಸಮಾವೇಶವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಎಂಬ ಮಾಹಿತಿಯನ್ನು ಮನೆ ಮನೆಗೆ ಮುಟ್ಟಿಸಲು ಯೋಜನೆ ರೂಪಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 24 October 22