ವಿಧಾನಸಭೆ ಚುನಾವಣೆ ಮೊದಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 14 ಪದಾಧಿಕಾರಿಗಳ ಉಚ್ಛಾಟನೆ
ಮುಂಬರುವ ವಿಧಾನಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ನಗರ ಮಹಾನಗರ ಪಾಲಿಕೆ ಚುನಾವಣೆ ಬಿಂಬಿತವಾಗಿದೆ. ಆದ್ರೆ, ಫೈನಲ್ಗೂ ಮುನ್ನವೇ ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಲ್ಲಿಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಅಂತಹ ಬಂಡಾಯ ಅಭ್ಯರ್ಥಿಗಳನ್ನ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ.
ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಅವರು ಪಕ್ಷ ವಿರೋಧಿ ಚಟುಟವಿಕೆ ಮಾಡಿದ್ದಾರೆಂಬ ಆರೋಪದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 14 ಜನರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಚುನಾವಣೆ ಮಧ್ಯೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಟಿಕೆಟ್ ವಂಚಿತರಿಂದ ಬಂಡಾಯದ ಬಿಸಿ..!
ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದ್ದಾರೆ. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಕಠಿಣ ಕ್ರಮ ಗ್ಯಾರಂಟಿ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ವಿಚಾರದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿತ್ತು. ಬಿಜೆಪಿ ಟಿಕೆಟ್ ಸಿಗದ ಕಾರಣ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇನ್ನು ಕೆಲವರು ಇತರೆ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದು ಬಿಜೆಪಿ ಪಾಲಿಕೆ ಇರುಸು ಮುರುಸು ಉಂಟು ಮಾಡಿತ್ತು.
ಪಕ್ಷದಿಂದ ಉಚ್ಛಾಟನೆಯಾದವರ ಪಟ್ಟಿ
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾರತಿ ಭುಯ್ಯಾರ, ಅಲ್ಪ ಸಂಖ್ಯಾತ ಮೋರ್ಚಾ ನಗರ ಮಂಡಳ ಆಧ್ಯಕ್ಷ ಅಲ್ತಾಫ್ ಇಟಗಿ, ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಾಬು ಜಾಧವ, ಜಿಲ್ಲಾ ವಿಶೇಷ ಆಹ್ವಾನಿತರು ಬಾಬು ಶಿರಸ್ಯಾಡ, ಸಹಕಾರಿ ಪ್ರಕೋಷ್ಟ ನಗರ ಮಂಡಳ ಸಂಚಾಲಕ ಅಶೋಕ ನ್ಯಾಮಗೊಂಡ, ಹಿಂದುಳಿದ ವರ್ಗಗಳ ನಗರ ಮೋರ್ಚಾ ಉಪಾಧ್ಯಕ್ಷ ಚಿನ್ನಪ್ಪ ಚಿನಗುಂಡಿ.
ನಗರ ಮಂಡಳ ಕಾರ್ಯದರ್ಶಿ ಬಸವರಾಜ ಗೋಳಸಂಗಿ, ಎಸ್ಟಿ ಮೋರ್ಚಾ ನಗರ ಮಂಡಳ ಆಧ್ಯಕ್ಷ ಅಭೀಷೇಕ ಸಾವಂತ, ಕೈಗಾರಿಕಾ ಪ್ರಕೋಷ್ಟ ನಗರ ಮಂಡಳ ಸಂಚಾಲಕ ಬಾಬು ಏಳಗಂಟಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿ ಬಗಲಿ, ಗ್ರಾಮೀಣ ಪಂಚಾಯತ್ ರಾಜ್ ಸಹ ಸಂಚಾಲಕ ರಾಜೂ ಬಿರಾದಾರ್, ಮಾಜಿ ಮಹಾಪೌರ ಸಂಗೀತಾ ಪೋಳ ಹಾಗೂ ಕಾರ್ಯರ್ತರಾದ ಸಿದ್ದಪ್ಪ ಹಳ್ಳಿ, ಸವಿತಾ ಪಾಟೀಲ್ ಉಚ್ಛಾಟನೆಗೊಂಡವರು.
ಅಶೋಕ ಯಡಳ್ಳಿ, ಟಿವಿ9 ವಿಜಯಪುರ.