ಬೆಂಗಳೂರು: ನಮ್ಮ ಭರವಸೆಗಳು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಕರ್ನಾಟಕ ಬಜೆಟ್ 2023 (Karnataka Budget 2023) ಮಂಡನೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ 2023-24ರ ಸಾಲಿನ ಬಜೆಟ್ ಮಂಡಿಸಿದ್ದು ಇದರ ಗಾತ್ರ 3,27,747 ಕೋಟಿ ರೂ. ಆಗಿದೆ. ಇದು ಪೂರ್ಣಪ್ರಮಾಣದ ಆಯವ್ಯಯವಾಗಿದೆ ಎಂದರು.
ಗ್ಯಾರಂಟಿ ಈಡೇರಿಸಿದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಅಂತ ಹೇಳುತ್ತಿದ್ದಾರೆ. ಆದರೆ ನಾವು ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ಬಜೆಟ್ನಲ್ಲಿ ನೋಡಿಕೊಂಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ನಮ್ಮದು ನುಡಿದಂತೆ ನಡೆದ ಸರ್ಕಾರ. ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಇದಕ್ಕೆ ಬಜೆಟ್ನಲ್ಲೂ ಹಣ ಒದಗಿಸಿದ್ದೇವೆ ಎಂದರು.
ಸಿಎಂ ಆಗಿದ್ದ ಬೊಮ್ಮಾಯಿ ಅದರಲ್ಲಿ ನಾಲ್ಕು ತಿಂಗಳ ಮಟ್ಟಿಗೆ ಲೇಖಾನುದಾನ ತೆಗೆದುಕೊಂಡಿದ್ದರು. ಚುನಾವಣಾ ಪೂರ್ವದಲ್ಲಿ ಮಂಡಿಸಿದ್ದ ಬಜೆಟ್ ಅದೊಂದು ರೀತಿ ಚುನಾವಣೆ ಬಜೆಟ್ ಅಂತ ಇರಬಹುದು ಎಂದು ಹೇಳಿದ ಸಿದ್ದರಾಮಯ್ಯ, ನಮ್ಮ ಸರ್ಕಾರದ ಮೇಲೆ ಜನರ ನಿರೀಕ್ಷೆಗಳು ಸಾಕಷ್ಟಿವೆ. ಶೆ.90 ರಷ್ಟು ಜನರ ಕೈಲಿ ಹಣ ಇಲ್ಲ ಶೇ.10 ರಷ್ಟು ಜನರ ಕೈಲಿ ಮಾತ್ರ ಹಣ ಇರುತ್ತದೆ. ಬೆಲೆ ಏರಿಕೆ ಹಣದುಬ್ಬರ ನಿರುದ್ಯೋಗದಿಂದ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ದುರ್ಬಲ ವರ್ಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದೆ ಎಂದರು.
ಪ್ರಸಕ್ತ ಬಜೆಟ್ ಗಾತ್ರ 3,27,747 ಕೋಟಿ ರೂ. ಆಗಿದ್ದು, 2022-23 ರಲ್ಲಿ ಮಂಡಿಸಿದ್ದ ಬಜೆಟ್ ಗಾತ್ರ 2,65,720 ಕೋಟಿ ರೂ. ಆಗಿದೆ. ಈ ವರ್ಷ 5 ಗ್ಯಾರಂಟಿಗಳಿಗೆ ಬೇಕಾದಂತ ಹಣ 35,410 ಕೋಟಿ ರೂ. ಆಗಿದೆ. ಒಟ್ಟು ವರ್ಷಕ್ಕೆ ಬೇಕಾದಂತ ಹಣ 52 ಸಾವಿರ ಕೋಟಿ ರೂ.ಗೂ ಹೆಚ್ಚು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Karnataka Budget 2023: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮಾದರಿಯಲ್ಲಿ ಕರ್ನಾಟಕದ ಸುವರ್ಣ ಮಹೋತ್ಸವ ಆಚರಣೆ
ವಿಪಕ್ಷದವರು ಹಣ ಎಲ್ಲಿಂದ ತರುತ್ತಾರೆ, ಹಣ ಹೇಗೆ ಹೊಂದಿಸುತ್ತಾರೆ, ಗ್ಯಾರಂಟಿ ಜಾರಿ ಆಗಲ್ಲ ಎನ್ನೋ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಅಂತ ದೇಶದ ಪ್ರಧಾನಿ ಆದವರು ಹೇಳಿದ್ದರು. ನಾನು ಗ್ಯಾರಂಟಿ ಕೊಟ್ಟಾಗಲೂ ಈಗಲೂ ಹೇಳುತ್ತೇನೆ. ಎಲ್ಲ ಗ್ಯಾರಂಟಿಗಳನ್ನು ನೂರಕ್ಕೆ ನೂರು ಜಾರಿಗೊಳಿಸುತ್ತೇವೆ ಎಂದು ಸಿಎಂ ಹೇಳಿದರು.
ಪ್ರಣಾಳಿಕೆಯಲ್ಲಿ ಇದ್ದ ಕಾರ್ಯಕ್ರಮಗಳನ್ನು ಜಾರಿ ಮಾಡಲು ಬಜೆಟ್ನಲ್ಲಿ ಘೋಷಣೆ ಮಾಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ಐದು ಗ್ಯಾರಂಟಿಗಳಿಗೂ ಹಣ ಒದಗಿಸಿದ್ದೇವೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಹಣ ನೀಡಲಾಗುವುದು. ಈ ಯೋಜನೆಗೆ ವಾರ್ಷಿಕವಾಗಿ 1 ಸಾವಿರ ಕೋಟಿ ವೆಚ್ಚ ಆಗಲಿದ್ದು, 3.70 ಲಕ್ಷ ನಿರುದ್ಯೋಗಿ ಪದವೀಧರರಿಗೆ ಅನುಕೂಲಕ ಆಗಲಿದೆ ಎಂದರು.
4ನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆ ಈಗಾಗಲೇ ಜಾರಿಯಾಗಿದ್ದು, ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ 7 ಕೆಜಿ ಅಕ್ಕಿ ಕೊಡುತ್ತಿದ್ದೆವು. ಆದರೆ ಬಿಜೆಪಿ ಸರ್ಕಾರ 5 ಕೆಜಿಗೆ ಅಕ್ಕಿ ಇಳಿಸಿತ್ತು. ಹಾಗಾಗಿ ಉಚಿತವಾಗಿ 10 ಕೆಜಿ ಕೊಡುತ್ತೇವೆ ಎಂದು ಹೇಳಿದ್ದೆವು. BPL, ಅಂತ್ಯೋದಯ ಕಾರ್ಡ್ದಾರರಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಗುವುದು. ಈ ಯೋಜನೆಯಿಂದ 4.42 ಕೋಟಿ ಜನರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ವಾರ್ಷಿಕವಾಗಿ 10,275 ಕೋಟಿ ವೆಚ್ಚ ಆಗುತ್ತದೆ ಎಂದರು.
ಹಣ ನೀಡುತ್ತೇವೆ ಅಕ್ಕಿ ಕೊಡಿ ಎಂದು ಆಹಾರ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (FCI) ಮನವಿ ಮಾಡಿದ್ದೆವು. ನಮಗೆ ಸುಮಾರು 2.28 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು. ಆದರೆ ರಾಜಕೀಯ ಕಾರಣಕ್ಕೆ ನಮಗೆ ಹೆಚ್ಚುವರಿ ಅಕ್ಕಿ ಪೂರೈಸಲ್ಲ ಎಂದು ಹೇಳಿದ್ದರು. ದ್ವೇಷದ ರಾಜಕಾರಣದಿಂದ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡಿಲ್ಲ. ಸದ್ಯ ಜುಲೈ 10ರಿಂದ ಅಕ್ಕಿ ಸಿಗುವವರೆಗೆ ಎಫ್ಸಿಐ ದರದಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರೂ. ನೀಡಲು ನಿರ್ಧಾರ ಮಾಡಲಾಗಿದೆ. ಓಪನ್ ಮಾರ್ಕೆಟ್ನಿಂದ ಅಕ್ಕಿ ಖರೀದಿಸಲು ಟೆಂಡರ್ ಕರೆದಿದ್ದೇವೆ. ಹೆಚ್ಚುವರಿ ಅಕ್ಕಿ ಸಿಕ್ಕಿದ ಬಳಿಕ ಉಚಿತವಾಗಿ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ