ಮಂಡ್ಯ: ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಾಯಕರ ಪ್ರಚಾರದ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಇತ್ತ ಕಾರ್ಯಕರ್ತರು ತಮ್ಮ ತಮ್ಮ ಮುಖಂಡರ ಪರ ಪ್ರಚಾರ ನಡೆಸುವುದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುವುದಕ್ಕೆ ಮುಂದಾಗಿದ್ದಾರೆ. ಅದರಂತೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆಂಬತಗೆರೆ ಗ್ರಾಮದ ನಿವಾಸಿ ರಾಮಣ್ಣ ಎಂಬಾತ ಜೆಡಿಎಸ್ ಶಾಸಕ ಅನ್ನದಾನಿಯವರ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಅದೊಂದು ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಪರಿಣಾಮವೇ ಈಗ ಆಸ್ಪತ್ರೆಯ ಬೆಡ್ ಮೇಲೆ ಮಲಗುವಂತಾಗಿದೆ. ಹೌದು ಕೆಟ್ಟದಾಗಿ ಕಾಮೆಂಟ್ ಮಾಡಿದಕ್ಕೆ ಜೆಡಿಎಸ್ ಫಾಲೋವರ್ ಬಸವರಾಜ ಎಂಬಾತ ರಾಮಣ್ಣನ ಕಿವಿಯನ್ನ ಕತ್ತರಿಸಿದ್ದಾನೆ.
ರಾಮಣ್ಣ ಕಾಂಗ್ರೆಸ್ ಅಭ್ಯರ್ಥಿ ಪಿಎಂ ನರೇಂದ್ರ ಸ್ವಾಮಿ ಫಾಲೋವರ್. ಫೇಸ್ಬುಕ್ನಲ್ಲಿ ಅಭಿವೃದ್ಧಿ ಹರಿಕಾರ ನರೇಂದ್ರ ಸ್ವಾಮಿ ಎಂಬ ಪೋಸ್ಟ್ ಹಾಕುವ ಮೂಲಕ ನರೇಂದ್ರಸ್ವಾಮಿಯವರ ಅಭಿವೃದ್ಧಿ ಕಾರ್ಯದ ಬಗ್ಗೆ ಸ್ಟೇಟಸ್ ಹಾಕಿದ್ರು. ಇದನ್ನ ನೋಡಿದ ಬಸವರಾಜ್ ಎಂಬಾತ ಆ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಇನ್ನು ಈ ಬಸವರಾಜ ಜೆಡಿಎಸ್ ಫಾಲೋವರ್ ಅದು ಅಲ್ಲದೆ ರಾಮಣ್ಣನ ಹಾಗೂ ಶಾಸಕ ಅನ್ನದಾನಿಯ ಸಂಬಂಧಿ ಕೂಡ. ನಿನ್ನೆ(ಮಾ.30) ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಬಸವರಾಜ ನೇರವಾಗಿ ಕೈ ಕಾರ್ಯಕರ್ತ ರಾಮಣ್ಣನ ಮನೆಗೆ ನುಗ್ಗಿ, ರಾಮಣ್ಣನನ್ನ ಮನೆಯಿಂದ ಆಚೆ ದರದರನೇ ಎಳೆದು ತಂದು ಹಲ್ಲೆ ಮಾಡಿದ್ದ. ನಮ್ಮ ಶಾಸಕರ ವಿರುದ್ದ ಕಾಮೆಂಟ್ ಮಾಡುತ್ತೀಯಾ ಎಂದು ಚಾಕುವಿನಿಂದ ಹಲ್ಲೆ ಮಾಡಿದ ಪರಿಣಾಮ ರಾಮಣ್ಣನ ಅರ್ಧ ಕಿವಿ ಕಟ್ ಆಗಿತ್ತು. ಜಗಳ ಬಿಡಿಸಿದ ಸ್ಥಳೀಯರು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆ ಮಾಡಿ ಸುದ್ದಿ ಮುಟ್ಟಿಸಿ ಹಲ್ಲೆಗೊಳಗಾದ ರಾಮಣ್ಣನನ್ನ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:ಪುತ್ರನ ರಾಜಕೀಯ ಭವಿಷ್ಯಕ್ಕಾಗಿ, ಹೈಕಮಾಂಡ್ ಒಪ್ಪಿದರೂ ವರುಣಾ ಸ್ಪರ್ಧೆ ಬೇಡ ಎಂದರಾ ಬಿಎಸ್ ಯಡಿಯೂರಪ್ಪ?
ಇನ್ನು ಘಟನೆಯ ಕುರಿತು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅನ್ನದಾನಿ ಈ ರೀತಿ ಕೃತ್ಯಕ್ಕೆ ಯಾರು ಮುಂದಾಗಬಾರದು ಎಲ್ಲರು ಸಹನೆಯಿಂದ ವರ್ತಿಸಬೇಕೆಂದು ಬುದ್ದಿ ಮಾತು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಬಸವರಾಜ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಹೇಳಿ ರಾಜಕೀಯ ನಾಯಕರ ಪ್ರತಿಷ್ಠೆಗಾಗಿ ಕಾರ್ಯಕರ್ತರು ಅದರಲ್ಲಿಯೂ ಸಂಬಂಧಿಗಳೇ ಬಡಿದಾಡಿಕೊಂಡಿದ್ದು ಮಾತ್ರ ದುರಂತವೇ ಸರಿ.
ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Sat, 1 April 23