ಶಿವರಾಮ್ ಹೆಬ್ಬಾರ್ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ, ವಿಡಿಯೋ ವೈರಲ್

| Updated By: Rakesh Nayak Manchi

Updated on: Aug 27, 2023 | 6:07 PM

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರಂಭವಾದ ಆಪರೇಷನ್ ಹಸ್ತ ಚರ್ಚೆಯಲ್ಲಿ ಕೇಳಿಬರುತ್ತಿದ್ದ ಹೆಸರುಗಳ ಪೈಕಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರ ಹೆಸರು ಕೂಡ ಒಂದಾಗಿದೆ. ಸದ್ಯ ಇವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಶಿವರಾಮ್ ಹೆಬ್ಬಾರ್ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ, ವಿಡಿಯೋ ವೈರಲ್
ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ಷೇಪ
Follow us on

ಕಾರವಾರ, ಆಗಸ್ಟ್ 27: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರಂಭವಾದ ಆಪರೇಷನ್ ಹಸ್ತ (Operation Hasta) ಚರ್ಚೆಯಲ್ಲಿ ಕೇಳಿಬರುತ್ತಿದ್ದ ಹೆಸರುಗಳ ಪೈಕಿ ಬಿಜೆಪಿ ಶಾಸಕರಾದ ಎಸ್​​ಟಿ ಸೋಮಶೇಖರ್ (S.T. Somashekhar) ಮತ್ತು ಶಿವರಾಮ್ ಹೆಬ್ಬಾರ್ (Shivaram Hebbar) ಅವರ ಹೆಸರುಗಳು ಸೇರಿವೆ. ಸದ್ಯ ಹೆಬ್ಬಾರ್ ಕಾಂಗ್ರೆಸ್ (Congress) ಸೇರ್ಪಡೆಯಾಗುವ ಬಗ್ಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಹೆಬ್ಬಾರ್ ಪಕ್ಷ ಸೇರ್ಪಡೆ ವದಂತಿ ಹಿನ್ನೆಲೆ ಸಭೆ ನಡೆಸಿದ ಕೈ ಕಾರ್ಯಕರ್ತರು, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಒಪ್ಪಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸರ್ಕಾರವನ್ನು ಕೆಡವಿ ಬಿಜೆಪಿ ಪಕ್ಷ ಸೇರಿದ್ದ ಶಿವರಾಮ್ ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್ ಬಂದರೆ ಶಾಸಕರನ್ನಾಗಿ ಮಾಡುವುದಿಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಗೆ ಬೇಕಾದರೆ ಸ್ಪರ್ಧಿಸಲಿ. ಆದರೆ ಶಾಸಕರಾಗಿ ಬೇಡ ಎಂದು ಹೇಳುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ವೋಟ್ ಶೇರ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮೆಗಾ ಪ್ಲ್ಯಾನ್! ಜಿಲ್ಲಾಮಟ್ಟದಲ್ಲೂ ಆಪರೇಷನ್ ಹಸ್ತಕ್ಕೆ ಮುಂದು

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಸಾಧ್ಯವಿಲ್ಲ ಎಂದು ಅರಿತು ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದಿದ್ದರು.

ಈ ನಡುವೆ ಆಪರೇಷನ್ ಹಸ್ತದ ಗುಟ್ಟು ರಟ್ಟು ಮಾಡಿದ್ದ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್, ದೆಹಲಿಗೆ ಬರುವಂತೆ‌ ನನಗೂ ಒತ್ತಡ ಹಾಕಿದ್ದರು. ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಮೂಲಕ ಪಕ್ಷಕ್ಕೆ‌ ಸೆಳೆಯುವ ಯತ್ನಿಸಿದ್ದರು. ಆದರೆ, ನಾನು ಹೋಗಿಲ್ಲ ಎಂದಿದ್ದರು.

2018ರ ವಿಧಾನಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಇದಾದ ಒಂದೇ ವರ್ಷಕ್ಕೆ ಆಪರೇಷನ್ ಕಮಲ ಮೂಲಕ ಹಲವು ಶಾಸಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದ್ದಲ್ಲದೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಆಪರೇಷನ್ ಹಸ್ತಕ್ಕೆ ಕೈಹಾಕಿದೆ.

ಆಪರೇಷನ್ ಹಸ್ತದಲ್ಲಿ ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರ ಬೆನ್ನಲ್ಲೇ ಸೋಮಶೇಖರ್ ಮಾತ್ರವಲ್ಲದೆ ಹೆಬ್ಬಾರ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ