16ರಿಂದ 18 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗಬಹುದು, ಪ್ರಲ್ಹಾದ ಜೋಶಿ ಬರ್ತೀನಿ ಅಂದ್ರೂ ಬೇಡ ಅನ್ನಲ್ಲ: ಶಾಸಕ ಕೋನರೆಡ್ಡಿ
ಪಕ್ಷಕ್ಕೆ ಬರುವವರ ಪಟ್ಟಿ ಮಾಡಿದ್ದಾರೆ, ನಾಯಕರು ತೀರ್ಮಾನಿಸುತ್ತಾರೆ. 16 ರಿಂದ 18 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಬಹುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್‌ಗೆ ಬರುತ್ತೇನೆ ಅಂದರೂ ಬೇಡ ಅನ್ನಲ್ಲ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿ, ಆಗಸ್ಟ್ 27: 16 ರಿಂದ 18 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಬಹುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್‌ಗೆ ಬರುತ್ತೇನೆ ಅಂದರೂ ಬೇಡ ಅನ್ನಲ್ಲ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ (Konareddy) ಟಾಂಗ್ ನೀಡಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬರುವವರ ಪಟ್ಟಿ ಮಾಡಿದ್ದಾರೆ, ನಾಯಕರು ತೀರ್ಮಾನಿಸುತ್ತಾರೆ. ಶಂಕರಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಆಗಿಲ್ಲ. ಪ್ರಲ್ಹಾದ ಜೋಶಿ ಸಾಹೇಬರೇ ಊರಿಗೆ ಬಂದವರು ನೀರಿಗೆ ಬರಲೇಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಟೆಂಡರ್ ಕರೆಯದಿದ್ದರೆ ನಾನು ಹುಬ್ಬಳ್ಳಿಗೆ ಕಾಲಿಡಲ್ಲ
ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಅನುಮತಿ ಕೊಡಲಿ. ನಮ್ಮ ಸರ್ಕಾರ ಟೆಂಡರ್ ಕರೆಯದಿದ್ದರೆ ನಾನು ಹುಬ್ಬಳ್ಳಿಗೆ ಕಾಲಿಡಲ್ಲ. ನನಗೆ ಆ ತಾಕತ್ ಇದೆ, ಕೇಂದ್ರ ಸರ್ಕಾರ ಅನುಮತಿ ನೀಡಲಿ. ನಮ್ಮ ಸರ್ಕಾರದಿಂದ ಟೆಂಡರ್ ಕರೆಸುತ್ತೇನೆ. ಲೋಕಸಭೆ ಚುನಾವಣೆ ಇದೆ. ಮಹದಾಯಿ ಯೋಜನೆ ಮಾಡಿಸಿಕೊಡಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಎಂದರು.
ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ: ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಶಾಸಕರಾಗಲಿ, ಪ್ರಮುಖರಾಗಲಿ ಕಾಂಗ್ರೆಸ್‌ಗೆ ಹೋಗುತ್ತಿಲ್ಲ. ದೇಶ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅತ್ಯಂತ ಸದೃಢವಾಗಿದೆ. ಕರ್ನಾಟಕದಲ್ಲಿಯೂ ಈ ಬಾರಿ 25 ಸ್ಥಾನಗಳನ್ನು ಗೆಲ್ಲುತ್ತೇವೆ. ಒಂದೆರಡು ಸ್ಥಾನಗಳು ಆ ಕಡೆ ಈ ಕಡೆ ಆಗಬಹುದು ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ಗದಗ: ದಯವಿಟ್ಟು ಭತ್ಯೆ ಕೊಡಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಕಾಲಿಗೆ ಬಿದ್ದ ಜಿಮ್ಸ್ ಸಿಬ್ಬಂದಿ
ಜನರನ್ನು ತಪ್ಪು ದಾರಿಗೆ ಎಳೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಮಧ್ಯಪ್ರದೇಶ, ರಾಜಸ್ಥಾನ ಸೇರಿ 5 ರಾಜ್ಯಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ತಿಳಿಸಿದರು.
ಹಲವಾರು ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವೈಯಕ್ತಿಕ ಕೆಲಸಗಳಾಗಿ ಅವರು ಭೇಟಿ ನೀಡಿರಬಹುದು. ಅವರು ಸಹ ಅದನ್ನೇ ಹೇಳಿದ್ದಾರೆ. ಆಪರೇಷನ್ ಹಸ್ತದ ಬೆಳವಣಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಕಮಿಷನ್ ಆರೋಪ: ಗುತ್ತಿಗೆದಾರರದ್ದು ತಪ್ಪಿಲ್ಲ, ಕೆಲವು ರಾಜಕೀಯದವರು ಮಾಡಿದ್ದು ಎಂದ ಡಿಕೆ ಶಿವಕುಮಾರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ವಿಚಾರವಾಗಿ ಮಾತನಾಡಿ, ಅಮಿತ್ ಶಾ ಕರೆ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಶಿವಲೀಲಾ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ, ಕಾಂಗ್ರೆಸ್ ಪಕ್ಷದಿಂದ ನನ್ನ ವಿರುದ್ಧ ಯಾರಾದರೂ ಒಬ್ಬರು ಸ್ಪರ್ಧೆ ಮಾಡುತ್ತಾರೆ. ಅದರ ಬಗ್ಗೆ ನಾನೇನು ಹೇಳಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.