ಕೊರೊನಾ ಅಕ್ರಮ ತನಿಖಾ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಬಿಜೆಪಿ ವಿರೋಧಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಕೊರೊನಾ ಅಕ್ರಮಗಳ ಆರೋಪದ ಕುರಿತು ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ತನಿಖಾ ಆಯೋಗ ರಚಿಸಿದೆ. ಈ ಆಯೋಗದ ನೇತೃತ್ವ ವಹಿಸಿಕೊಂಡಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಹುಬ್ಬಳ್ಳಿ: ಕಳೆದ ಸರ್ಕಾರದ ಅವಧಿಯಲ್ಲಿ ಕೊರೊನಾ (Covid) ಸೋಂಕು ಅಬ್ಬರದ ವೇಳೆ, ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ರಾಜ್ಯ ಸರ್ಕಾರ ನಿನ್ನೆ (ಆ.26) ರಂದು ಆದೇಶ ಹೊರಡಿಸಿತ್ತು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾತನಾಡಿ “ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ಅವರು ದಿನ ಬೆಳಗಾದರೇ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಬೈಯುವುದೆ ಅವರ ಕೆಲಸ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ನವರು ಬೇಕಂತಲೇ ಬಿಜೆಪಿ ವಿರೋಧಿ ನಿವೃತ್ತ ನ್ಯಾಯಾಧೀಶರನ್ನು ಇಟ್ಟು ಬಿಜೆಪಿಗೆ ಬೈಯಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಂದ ದಿನ ನಮ್ಮನ್ನು ಬೈಸುವ ಕೆಲಸ ಮಾಡ್ತಿದಾರೆ. ಜನ ಇದನ್ನ ನೋಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತ ಬಿಜಾಸುರರಿದ್ದಂತೆ: ಪ್ರಹ್ಲಾದ್ ಜೋಶಿ
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತ ಬಿಜಾಸುರರಿದ್ದಂತೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದಂತವರು ಕಾಂಗ್ರೆಸ್ನವರು. ಇದನ್ನು ನಾವು ಹೇಳುತ್ತಿಲ್ಲ ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಅಂತ ಅವರು ಹೇಳಿದ್ದಾರೆ. ಬಸವರಾಜ್ ರಾಯರೆಡ್ಡಿ ಅವರು ಭ್ರಷ್ಟಾಚಾರ ಬಹಳ ಆಗಿದೆ ಅಂತ ಹೇಳಿದ್ದಾರೆ. ಇದನ್ನೆಲ್ಲ ಮೊದಲು ನೋಡಿಕೊಳ್ಳಿ ಎಂದು ಹರಿಹಾಯ್ದರು.
ಇದನ್ನೂ ಓದಿ: 40% ಕಮಿಷನ್ ಸೇರಿದಂತೆ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆಯಾಗುತ್ತೆ: ಸ್ಪಷ್ಟಡಿಸಿದ ಸಿದ್ದರಾಮಯ್ಯ
ಇನ್ನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಹೆಸರನ್ನು ಯು.ಪಿ.ಎ ಎಂದು ಬದಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿಯವರು, ಕಾಂಗ್ರೆಸ್ ನಾಯಕರು UPA ಮೈತ್ರಿ ಕೂಟದ ಹೆಸರನ್ನ ಯಾಕೆ ಚೇಂಜ್ ಮಾಡಿದ್ರು ಅಂತ ಲೆಕ್ಕ ಹಾಕ್ತಾ ಇದ್ವಿ, ಅಂಗಡಿ, ಫ್ಯಾಕ್ಟರಿಗಳಲ್ಲಿ ಪ್ರೊಡಕ್ಟ್ ಅದೇ ಇರುತ್ತೆ ಆದರೆ ಕೆಟ್ಟ ಬ್ರಾಂಡ್ ಎಂಬ ಹಣೆಪಟ್ಟಿ ಬಂದ ಮೇಲೆ ಅದೇ ಪ್ರಾಡಕ್ಟ್ ನ ಹೆಸರು ಮಾತ್ರ ಬದಲಾಯಿಸುತ್ತಾರೆ, ಈಗ ಕಾಂಗ್ರೆಸ್ ನಾಯಕರು ಯುಪಿಎ ಮೈತ್ರಿಕೂಟದ ಹೆಸರು ಬದಲಿಸಿರೋದು ಕೂಡ ಇದೇ ರೀತಿ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಭಾಷಣದ ವೇಳೆ ” UPA ಕಾಲದಲ್ಲಿ 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು, ಭ್ರಷ್ಟಾಚಾರ ಆಗಿದೆ, ಅಷ್ಟು ಲೆಕ್ಕ ಮಾಡಿದ ಮೇಲೆ ಸಾಕಾಗಿ ನಾನೇ ಲೆಕ್ಕ ನಿಲ್ಲಿಸಿಬಿಟ್ಟೆ” ಎಂದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಬೇರೆ ದೇಶದಿಂದ ವೀಸಾ ತಗೊಂಡು ಒಳಗೆ ಬರಬೇಕು ಅಂದ್ರೆ ಕಾನ್ಸುಲೆಟ್ ನಲ್ಲಿ ಕೂಡ ದುಡ್ಡು ತಗೋತಾರೆ ಎಂಬ ಆರೋಪ ಇತ್ತು. ಹೀಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತೀರಾ..? ಸ್ವತಃ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ, ರಾಜ್ಯ ಕಾಂಗ್ರೆಸ್ ನಾಯಕರ ತನಿಖಾಸ್ತ್ರ ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಎಂದು ಕೈ ನಾಯಕರನ್ನು ಜೋಶಿ ತರಾಟೆಗೆ ತೆಗೆದುಕೊಂಡರು.
ಇನ್ನು ಚಂದ್ರಯಾನದ ಯಶಸ್ಸಿನ ಬಗ್ಗೆ ಮಾತನಾಡಿದ ಜೋಶಿ, ಚಂದ್ರಯಾನದ ಯಶಸ್ಸು ದೇಶದ ಯುವಜನರ ಉತ್ಸಾಹ ಇಮ್ಮಡಿಗೊಳಿಸಿದೆ. ಈಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿರುವ ಭಾರತ 2047ರ ಹೊತ್ತಿಗೆ ಸ್ವತಂತ್ರ ಬಂದು ನೂರು ವರ್ಷ ಆಗುವ ಸಂದರ್ಭದಲ್ಲಿ ವಿಕಾಸಿತ ದೇಶವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರನ ದಕ್ಷಿಣ ದ್ರುವದಲ್ಲಿ ಮೊದಲ ಬಾರಿಗೆ ನಮ್ಮ ಚಂದ್ರಯಾನ3 ಅಂತರಿಕ್ಷ ನೌಕೆ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ಜಗತ್ತಿನಲ್ಲೇ ಭಾರತದ ಹಿರಿಮೆ ಹೆಚ್ಚಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಇದಕ್ಕಾಗಿ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.350ಕ್ಕೂ ಹೆಚ್ಚು ಉಪಗ್ರಹಗಳು ಲಾಂಚ್ ಆಗಿವೆ. ನಾವು ಪ್ರಪಂಚದ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
40% ಕಮಿಷನ್, ಕೊರೊನಾ ವೇಳೆಯ ಹಗರಣಗಳ ಬಗ್ಗೆ ತನಿಖೆ ಆಗಲಿ: ಬೊಮ್ಮಾಯಿ
40% ಕಮಿಷನ್, ಕೊರೊನಾ ವೇಳೆಯ ಹಗರಣಗಳ ಬಗ್ಗೆ ವಿಚಾರಣೆ ಆಗಲಿ, ತನಿಖೆ ಆಗಲಿ ಇದರಲ್ಲಿ ಆಶ್ಚರ್ಯವೇನು ಇಲ್ಲ. 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ. ಎಲ್ಲಾ ಆರೋಪಗಳ ಬಗ್ಗೆಯೂ ತನಿಖೆ ಮಾಡಿ ಅಂತ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪಿಎಸ್ಐ ನೇಮಕಾತಿ ಪ್ರಕರಣದ ತನಿಖೆಯಾಗಿ ಚಾರ್ಜ್‌ಶೀಟ್ ಆಗಿದೆ. ಕಾಂಗ್ರೆಸ್ನವರು ಚಾರ್ಜ್ಶೀಟ್ನಲ್ಲಿರುವವರ ರಕ್ಷಣೆ ಮಾಡುತ್ತಾರಾ? ಅಥವಾ ಬೇರೆ ಆಯಾಮದಲ್ಲಿ ತನಿಖೆ ಮಾಡುತ್ತಾರಾ ? ಪಿಎಸ್ಐ ನೇಮಕಾತಿ ಹಗರಣದ ತನಿಖೆಯನ್ನೂ ಪೊಲೀಸರೇ ಮಾಡಬೇಕು. ಯಾವ ರೀತಿ ತನಿಖೆ ಮಾಡುತ್ತಾರೆ ಅಂತ ನೋಡೋಣ ಎಂದರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಇನ್ನು 40% ಆರೋಪದಲ್ಲಿ ನಿರ್ದಿಷ್ಟ ಪ್ರಕರಣ ಇಲ್ಲ, ದಾಖಲೆ ಇಲ್ಲ. ಎರಡು ವರ್ಷವಾದರೂ ಅವರು ದಾಖಲೆ ಕೊಟ್ಟಿಲ್ಲ. ಲೋಕಾಯುಕ್ತ ಎದುರು ಹೆಚ್ಚು ಟೆಂಡರ್ ಕೊಟ್ಟ ಹಲವು ಪ್ರಕರಣಗಳು ಇವೆ. ಇವುಗಳನ್ನು ತನಿಖೆಗೆ ಕೊಡ್ತಾರಾ? ಹೊಸ ದೂರು ಕೊಟ್ಟರೆ ಇವರು ಸೇರಿಸಿಕೊಳ್ಳುತ್ತಾರಾ? ಭ್ರಷ್ಟಾಚಾರ ಯಾವತ್ತಿದ್ದರೂ ಭ್ರಷ್ಟಾಚಾರವೇ, ಅವರ ಕಾಲದ ಆರೋಪಗಳನ್ನು ತನಿಖೆ ಮಾಡುತ್ತಾರಾ? ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಅಂತ ಮುಕ್ತವಾಗಿ ಹೇಳಿದ್ದೇವೆ. ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಲಿ ಅದಕ್ಕೆ ಯಾಕೆ ಹಿಂದೇಟು ಹಾಕಿದ್ದಾರೆ? ಇದರ ಹಿಂದೆ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Sun, 27 August 23