ಕೊಟ್ಟ ಭರವಸೆ ಈಡೇರಿಸಿದ್ದಕ್ಕೆ ಸ್ವಾಗತ, ಯೋಜನೆ ಅನುಷ್ಠಾನಕ್ಕೆ ತರುವ ಕೆಲಸ ಆಗಲಿ ಎಂದ ಸಿಟಿ ರವಿ
ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದಕ್ಕೆ ಸ್ವಾಗತಿಸುತ್ತೇವೆ. ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ದೆಹಲಿ: ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದಕ್ಕೆ ಸ್ವಾಗತಿಸುತ್ತೇವೆ. ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (Ct Ravi) ಹೇಳಿದರು. ದೆಹಲಿಯಲ್ಲಿ ಮಾಧ್ಯವರೊಂದಿಗೆ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಮುದ್ರಿಸಿರುವಂತೆ ಪ್ರತಿ ವ್ಯಕ್ತಿ ಅಂತಾ ಹೇಳಿದ್ದರು. ಆದರೆ ಈಗ ಘೋಷಣೆ ವೇಳೆ ಕುಟುಂಬಕ್ಕೆ ಅಂತಾ ಹೇಳಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ. ಖರ್ಚು ವೆಚ್ಚ ಸೇರಿ ಯೋಜನೆಗಳಿಗೆ ಎಷ್ಟು ಹಣ ಮಾಹಿತಿ ಕೊಡಿ ಎಂದು ಹೇಳಿದರು.
ಚಾಲ್ತಿಯಲ್ಲಿರುವ ಯೋಜನೆಗಳಿಗೆ ತಗಲುವ ವೆಚ್ಚದ ಬಗ್ಗೆ ತಿಳಿಸಿ. ರಾಜ್ಯದ ಜನ ಆರ್ಥಿಕ ವೆಚ್ಚದ ಒಂದು ನಿಲುವಿಗೆ ಬರಬೇಕಾಗಿದೆ. ಶ್ರೀಲಂಕಾ, ಪಾಕಿಸ್ತಾನದಂತಹ ಪರಿಸ್ಥಿತಿಗೆ ಕರ್ನಾಟಕ ಬರಬಾರದು. ನಿಮ್ಮ ಗ್ಯಾರೆಂಟಿಗಳು ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಆಗೋದು ಬೇಡ. ನಿಮ್ಮ ಗ್ಯಾರೆಂಟಿಗಳು ಒಳಪೆಟ್ಟು ಕೊಟ್ಟ ಹಾಗೆ ಆಗಬಾರದು ಎಂದರು.
ಇದನ್ನೂ ಓದಿ: ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ; ಹೇಳಿದ್ದೇ ಬೇರೆ ಘೋಷಿಸಿದ್ದೇ ಬೇರೆ ಎಂದ ಬಸವರಾಜ ಬೊಮ್ಮಾಯಿ
ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದ ಸಿ.ಟಿ.ರವಿ
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರವಾಗಿ ಮಾತನಾಡಿದ ಅವರು, ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. BJP ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ. ಪಕ್ಷ ವಹಿಸಿದ ಕೆಲಸ ಮಾಡುತ್ತಾ ಬಂದಿದ್ದೇನೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಾಕಷ್ಟು ಕೆಲಸಗಳಿವೆ. ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡ್ತೇವೆ ಎಂದು ಹೇಳಿದರು.
ಸರ್ಕಾರ ತಕ್ಷಣ ಶ್ವೇತ ಪತ್ರ ಹೊರಡಿಸಲಿ: ನಳಿನ್ ಕುಮಾರ್ ಕಟೀಲ್
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿದೆ. ಫಲಿತಾಂಶದ 24 ಗಂಟೆ ಅಂತ ಹೇಳಿ ಜನಾಕ್ರೋಶದ ಬಳಿಕ ತಡವಾಗಿ ಘೋಷಣೆ ಮಾಡಿದ್ದಾರೆ. ಇದನ್ನ ನಾನು ಸ್ವಾಗತಿಸ್ತೇನೆ, ಜನಪರ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಇದಕ್ಕೆ ಹಣದ ಮೂಲ, ಹಣದ ಕ್ರೋಡೀಕರಣ, ಎಷ್ಟು ವರ್ಷ ಇರುತ್ತೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದರು.
ಇದನ್ನೂ ಓದಿ: Karnataka Guarantee Schemes: 5 ಗ್ಯಾರಂಟಿ ಜಾರಿ, ಅಧಿಕೃತವಾಗಿ ಘೋಷಿಸಿದ ಸಿಎಂ: ಕಂಡೀಷನ್ಗಳೇನು? ಇಲ್ಲಿದೆ ವಿವರ
ನಿರುದ್ಯೋಗ ಭತ್ಯೆಗೆ ಮಾನದಂಡ ಹಾಕಿದ್ದಾರೆ, ಮೊದಲು ಮಾನದಂಡದ ಬಗ್ಗೆ ಹೇಳಿರಲಿಲ್ಲ. ಖಾಸಗಿ ಬಸ್ಸುಗಳಲ್ಲಿ ಸಂಚರಿಸೋರಿಗೆ ಏನು? ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಇದೆ. ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನು ಅಂತ ಹೇಳಲಿ. ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದೇ ಹೇಗೆ ನಿಯಂತ್ರಿಸುತ್ತಾರೆ.
ಇದು ಚುನಾವಣೆ ಗಿಮಿಕ್ ಆಗಬಾರದು, ತಾ.ಪಂ, ಜಿ.ಪಂ ಚುನಾವಣೆ ಮುಂದಿಟ್ಟು ಯೋಜನೆ ಮಾಡುತ್ತಿದ್ದಾರೆ ಎನ್ನುವ ಅನುಮಾನ ಇದೆ. ಹೀಗಾಗಿ ಜನರಿಗೆ ಹೊರೆಯಾಗದಂತೆ ಈ ಯೋಜನೆ ಜಾರಿಯಾಗಲಿ. ಖಾಸಗಿ ಬಸ್ಸುಗಳ ಬಗ್ಗೆ ಎಲ್ಲೂ ಹೇಳಿಲ್ಲ, ಅದನ್ನು ಹೇಳಲಿ. ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳಲ್ಲಿ ಹೋಗೋರಿಗೆ ಏನು ಕೊಡುಗೆ ಅಂತ ಹೇಳಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.