ವಿಜಯಪುರ / ಬೆಂಗಳೂರು, ಅಕ್ಟೋಬರ್ 18: ಸಚಿವ ಶಿವಾನಂದ ಪಾಟೀಲ್ (Shivanand Patil) ಮೇಲೆ ನೋಟುಗಳ (Currency Notes) ಸುರಿಮಳೆಗೈದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೂರ್ನಾಲ್ಕು ದಿನಗಳ ಹಿಂದೆ ನಡೆದಿರೋ ವಿಚಾರ ಇದಾಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಚಾರವಾಗಿ ಇದೀಗ ಸಚಿವರು ಸ್ಪಷ್ಟನೆ ನೀಡಿದ್ದು, ನಾನು ಮದುವೆಗೆ ಹೋಗಿದ್ದೆ. ಅಲ್ಲಿಯವರ ಕ್ರಮವನ್ನು ಅವರು ಅನುಸರಿಸಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಭಾಗಿಯಾಗಿದ್ದರು. ಮದುವೆ ಕಾರ್ಯಕ್ರಮದ ನಿಮಿತ್ತ ಕವ್ವಾಲಿ ಆಯೋಜನೆ ಮಾಡಲಾಗಿತ್ತು. ಕವ್ವಾಲಿ ವೀಕ್ಷಿಸುತ್ತಿದ್ದ ವೇಳೆ ಸಚಿವ ಶಿವಾನಂದ ಪಾಟೀಲ್ ಮೇಲೆ ವ್ಯಕ್ತಿಯೊಬ್ಬರು ನೋಟುಗಳ ಮಳೆಗೈದಿದ್ದಾರೆ. ಘಟನೆ ಕುರಿತು ಪರ ವಿರೋಧ ಚರ್ಚೆ ನಡೆದಿದೆ.
ರಾಜ್ಯದಲ್ಲಿ ಬರಗಾಲ ಇದೆ. ವಿದ್ಯುತ್ ಅಭಾವವಿದೆ. ವಿದ್ಯುತ್ ಇಲ್ಲದೇ ರೈತರ ಬೆಳೆಗಳು ಹಾಳಾಗುತ್ತಿವೆ. ಇಂಥ ಸಂದರ್ಭದಲ್ಲಿ ಸಚಿವರ ಮೇಲೆ ನೋಟಿನ ಮಳೆಗೈದರೂ ಸಚಿವರು ಯಾವುದೇ ಪ್ರತಿರೋಧ ತೋರಿಲ್ಲ. ಬರದ ಮಧ್ಯೆ ಸಚಿವ ಶಿವಾನಂದ ಪಾಟೀಲ ನೋಟುಗಳನ್ನು ತಮ್ಮ ಮೇಲೆ ಹಾರಿಸಿದರೂ ತಡೆಯಲಿಲ್ಲಾ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದಾರೆ. ಆದರೆ, ಪ್ರತಿಪಕ್ಷಗಳ ಟೀಕೆಗೆ ಶಿವಾನಂದ ಪಾಟೀಲ್ ಅವರು ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಲಗ್ನಕ್ಕೆ ಹೋಗಬಾರದಾ? ಅದು ಅಲ್ಲಿಯವರ ಸಂಸ್ಕೃತಿ, ಅದಕ್ಕೆ ನಾನೇನು ಮಾಡಲು ಸಾಧ್ಯ? ಹೈದರಾಬಾದ್ನಲ್ಲಿ ಬರ ಇದೆಯೇ? ಅಲ್ಲಿಯ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನೂ ಈಗ ವೈರಲ್ ಮಾಡ್ತೀರಾ ನೀವು? ಯಾರೋ ಮಾಡಿದ್ದಕ್ಕೆ ನಾನು ಮದುವೆಗೆ ಹೋಗಬಾರದಾ? ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ. ನಾನು ಹೋಗಿ ಅವರ ಕಲ್ಚರ್ ನಿಲ್ಲಿಸೋದಕ್ಕಾಗುತ್ತದೆಯೇ ಎಂದು ಮಾಧ್ಯಮಗಳ ವಿರುದ್ದ ಸಚಿವ ಶಿವಾನಂದ ಪಾಟೀಲ್ ಹರಿಹಾಯ್ದಿದ್ದಾರೆ.
ಈಗಾಗಲೇ ಗುತ್ತಿಗೆದಾರರ ಮೇಲಿನ ಐಟಿ ದಾಳಿ ಪ್ರಕರಣ, ಭ್ರಷ್ಟಾಚಾರ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಈ ಮಧ್ಯೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿಯೂ ಭಿನ್ನಮತ, ಅಸಮಾಧಾನದ ಹೊಗೆಯಾಡುವಿಕೆ ಹೆಚ್ಚಾಗಿದೆ. ಇವೆಲ್ಲವನ್ನೂ ಸಂಭಾಳಿಸಿಕೊಂಡು ಹೋಗಲು ಕಾಂಗ್ರೆಸ್ ಹೈಕಮಾಂಡ್ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸಚಿವರು, ಶಾಸಕರ ಕೆಲವು ವರ್ತನೆಗಳೂ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೀಗ ಶಿವಾನಂದ ಪಾಟೀಲ್ ಅವರ ಮೇಲೆ ನೋಟಿನ ಮಳೆಗೈದ ವಿಚಾರವನ್ನೂ ಸಹ ಪ್ರತಿಪಕ್ಷಗಳು ಟೀಕೆಗೆ ಅಸ್ತ್ರವನ್ನಾಗಿ ಮಾಡಿಕೊಂಡಿವೆ.
ಇದನ್ನೂ ಓದಿ: ಕುಡಿದು ಸತ್ತಿದ್ದರೂ ಪರಿಹಾರದ ಆಸೆಗೆ ಆತ್ಮಹತ್ಯೆ ಅಂತಾರೆ: ಅನ್ನದಾತನ ಬಗ್ಗೆ ಶಿವಾನಂದ ಪಾಟೀಲ್ ಅವಹೇಳನ ಹೇಳಿಕೆ
ಕುಡಿದು ಸತ್ತಿದ್ದರೂ ಪರಿಹಾರದ ಆಸೆಗೆ ಆತ್ಮಹತ್ಯೆ ಎನ್ನುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದು ಕೆಲವು ದಿನಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಚಿವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಸಚಿವ ಶಿವಾನಂದ್ ಪಾಟೀಲ್ ಮೇಲೆ ನೋಟಿನ ಮಳೆಗೈದ ಮತ್ತು ಅವರು ಹಣದ ಮೇಲೆ ಕಾಲಿಟ್ಟು ಕುಳಿತ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ, ಸಾಮಾಜಿಕವಾಗಿ ನಾನೇ ಆಗಲಿ ಯಾರೇ ಆದರೂ ಹೆಜ್ಜೆ ಇಡುವಾಗ ನೋಡಿಕೊಂಡು ಇಡಬೇಕು. ಸಮಾಜದಲ್ಲಿ ವಿಚಾರಗಳು ಇರುತ್ತವೆ. ನಾವು ಮಾತನಾಡುವ ರೀತಿ ಎಲ್ಲವನ್ನೂ ಜನರು ನೋಡುತ್ತಿರುತ್ತಾರೆ. ಬಹಳ ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಚರ್ಚೆಗೆ ನಾನು ಹೋಗುವುದಿಲ್ಲ. ಅಂತಹ ಬುದ್ಧಿ ನನಗಂತೂ ಇಲ್ಲ. ರಾಜ್ಯ ಹಾಗೂ ದೇಶದಲ್ಲಿ ಅಂಬೇಡ್ಕರ್ ಬರೆದಿರುವ ಸಂವಿಧಾನ ಮೇಲೆ ನಿಂತುಕೊಳ್ಳಬೇಕು. ಸಂವಿಧಾನ ಪ್ರಕಾರ ಯಾರೇ ತಪ್ಪು ಮಾಡಿದರು ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ