AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಸತ್ತಿದ್ದರೂ ಪರಿಹಾರದ ಆಸೆಗೆ ಆತ್ಮಹತ್ಯೆ ಅಂತಾರೆ: ಅನ್ನದಾತನ ಬಗ್ಗೆ ಶಿವಾನಂದ ಪಾಟೀಲ್ ಅವಹೇಳನ ಹೇಳಿಕೆ

ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2020ನೇ ವರ್ಷದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳಿದರು.

ಕುಡಿದು ಸತ್ತಿದ್ದರೂ ಪರಿಹಾರದ ಆಸೆಗೆ ಆತ್ಮಹತ್ಯೆ ಅಂತಾರೆ: ಅನ್ನದಾತನ ಬಗ್ಗೆ ಶಿವಾನಂದ ಪಾಟೀಲ್ ಅವಹೇಳನ ಹೇಳಿಕೆ
ಸಚಿವ ಶಿವಾನಂದ ಪಾಟೀಲ್​
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ

Updated on: Sep 05, 2023 | 1:54 PM

ಹಾವೇರಿ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ (Shivanand Patil) ಮಾತನಾಡಿ ಒಬ್ಬರು ಕುಡಿದು ಕುಡಿದು ಸತ್ತಿದ್ದರು, ಹೃದಯಾಘಾತದಿಂದ ಸತ್ತವರೂ ಇದ್ದಾರೆ. ಆತ್ಮಹತ್ಯೆ ಅಂತ ದೂರು ಕೊಟ್ಟರೇ ಪರಿಹಾರ ಸಿಗುತ್ತೆ ಎನ್ನೋದು ದುರಾಸೆ ಸಂಬಂಧಿಕರದ್ದು. ರೈತರು (Farmers) ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2020ನೇ ವರ್ಷದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನೀವು ಎಫ್​ಐಆರ್​ ಪರಿಗಣೆನೆ ತೆಗೆದುಕೊಂಡರೆ ನಿಮ್ಮ ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸುಮ್ಮ ಸುಮ್ಮನೆ ಪತ್ರಿಕೆದವರು ಯಾಕೆ ಬರಿಯುತ್ತಿದ್ದಾರೆ ಗೊತ್ತಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇರುತ್ತಾರೆ. ನೀವೂ ಪರಿಶೀಲನೆ ಮಾಡಿ ಬರೆಯಬೇಕು. ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ ಎಂದರು.

ಇದನ್ನೂ ಓದಿ: ಮಳೆ ನಂಬಿ ಲಕ್ಷಾಂತರ ಖರ್ಚು ಮಾಡಿ ಬ್ಯಾಡಗಿ ಮೆಣಸು ಬೆಳೆದು ಗೋಳಾಡುತ್ತಿರುವ ರೈತ

ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಹೀಗಾಗಿ ತಪ್ಪು ವರದಿ ಮಾಡುವುದರಿಂದ ಗಾಭರಿಯಾಗುತ್ತದೆ. ಪರಿಹಾರ ಸಿಗಬಹುದು ಎಂದು ಆ ರೀತಿ ವರದಿ ಮಾಡುತ್ತಾರೆ. ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2014 ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಜನರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೀವೆ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗುತ್ತಿರಲ್ಲಿ. ಇವಾಗ ಹೆಚ್ಚು ವರದಿ ಆಗುತ್ತಿವೆ ಎಂದು ಹೇಳಿದರು.

ನಾವು ಇಂದೇ ಐವತ್ತು ಲಕ್ಷ ಹಣ ಕೊಡುತ್ತೇವೆ, ಸಚಿವರೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ?

ಇನ್ನು ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಇಂದೆ ಐವತ್ತು ಲಕ್ಷ ಹಣ ಕೊಡುತ್ತೇವೆ, ಸಚಿವರೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ? ನಿಮ್ಮ ಪರಿಹಾರದ ಬದಲು ಆತ್ಮಹತ್ಯೆ ಕಡಿಮೆ ಮಾಡಲು ಕ್ರಮಕೈಗೊಳ್ಳಿ. ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಸಚಿವರನ್ನು ಘೇರಾವ ಹಾಕಲಾಗುವುದು. ಸರ್ಕಾರ ಕೂಡಲೆ ಹಾವೇರಿ ಜಿಲ್ಲಾ ಉಸ್ತುವರಿ ಸ್ಥಾನದಿಂದ ಇವರನ್ನು ಮುಕ್ತಗೊಳಿಸಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ