ದಾವಣಗೆರೆ: ಮೋದಿ ಮಹಾ ಸಂಗಮ ಸಮಾವೇಶಕ್ಕೆ ಬರುವ ಜನರಿಗೆ ಐದು ಕಿಮೀ ಪಾದಯಾತ್ರೆ ಅನಿವಾರ್ಯ
ಮೋದಿ ಮಹಾಸಂಗಮ ಸಮಾವೇಶಕ್ಕೆ ಆಗಮಿಸುವ ಜನರು ಹಾಗೂ ಅಭಿಮಾನಿಗಳಿಗೆ ಐದು ಕಿಲೋ ಮೀಟರ್ ಪಾದಯಾತ್ರೆ ಮಾಡುವುದು ಅನಿವಾರ್ಯವಾಗಿದೆ. ವೇದಿಕೆಯಿಂದ 4ರಿಂದ 5 ಕಿಲೋ ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ದಾವಣಗೆರೆ: ರಾಜ್ಯದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ದಾವಣಗೆರೆಗೆ (Davanagere) ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಲಿದ್ದು, ನಗರದ ಹೊರ ವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ನಡೆಯುವ ಮೋದಿ ಮಹಾಸಂಗಮ ಸಮಾವೇಶ (Modi Maha Sangama Convention) ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಆದರೆ ಈ ಕಾರ್ಯಕ್ರಮಕ್ಕೆ ಆಗಮಿಸುವ ಜನರು ಹಾಗೂ ಅಭಿಮಾನಿಗಳಿಗೆ ಐದು ಕಿಲೋ ಮೀಟರ್ ಪಾದಯಾತ್ರೆ ಮಾಡುವುದು ಅನಿವಾರ್ಯವಾಗಿದೆ. ವೇದಿಕೆಯಿಂದ 4ರಿಂದ 5 ಕಿಲೋ ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಂದ ಸಮಾವೇಶದ ಸ್ಥಳಕ್ಕೆ ನಡೆದುಕೊಂಡೇ ಬರಬೇಕಾಗಿದೆ.
ಬೆಂಗಳೂರು ಕಡೆಯಿಂದ ಸಮಾವೇಶಕ್ಕೆ ಬರುವ ಜನರಿಗೆ ದಾವಣಗೆರೆ ನಗರದ ಎಪಿ ಎಂಸಿ ಬಳಿಯ ಚಿಕ್ಕನಹಳ್ಳಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ವಿಜಯನಗರ ಚಳ್ಳಿಕೆರೆಯಿಂದ ಬರುವರಿಗೆ ಆವರಗೋಳ್ ರಸ್ತೆಯ ಬಡಗಿ ಕೃಷ್ಣಪ್ಪ ಲೇಔಟ್ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಉತ್ತರ ಕರ್ನಾಟಕದ ಹುಬ್ಬಳ್ಳಿ, ಹಾವೇರಿ ಹಾಗೂ ಮಲೆನಾಡಿನ ಶಿವಮೊಗ್ಗದಿಂದ ಬರುವ ಜನರಿಗೆ ಕೇಂದ್ರಿಯ ವಿದ್ಯಾಲಯದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಸ್ಥಳಗಳು ವೇದಿಕೆಯಿಂದ ನಾಲ್ಕರಿಂದ ಐದು ಕಿ.ಮೀ. ದೂರದಲ್ಲಿದೆ.
ದಾವಣಗೆರೆಗೆ ಮೋದಿ, ಪಿಯು ಮಕ್ಕಳಿಗೆ ತಲೆಬಿಸಿ
ನಾಳೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಬಸ್ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಪರೀಕ್ಷೆ ಬರುವ ಮಕ್ಕಳಿಗೆ ಬಂದು ಹೋಗುವುದು ಕಷ್ಟವಾಗುವ ಸಾಧ್ಯತೆ ಇದೆ. ಸಮಾವೇಶ ನಡೆಯುವ ಸ್ಥಳದ ಬಳಿ ಇರುವ ಜಿಎಂಐಟಿ ಕಾಲೇಲ್ನಲ್ಲಿ ಸಹ ಪಿಯುಸಿ ಪರೀಕ್ಷೆ ಇದ್ದು, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ.
ಮಹಾಸಂಗಮಕ್ಕೆ ರಾಜ್ಯದ ಎಲ್ಲ ಹಾಲಿ ಶಾಸಕ, ಸಂಸದರು ಸೇರಿದಂತೆ ಮಾಜಿ ಶಾಸಕ, ಸಂಸದರು ಆಗಮಿಸಿದ್ದು, 420ಅಡಿ ಅಗಲ ಹಾಗೂ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಂದೂವರೆಯಿಂದ ಎರಡು ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ವೇದಿಕೆ ಜೊತೆಗೆ ಇನ್ನೇರಡು ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಪ್ರಧಾನಿ ಸೇರಿ ನೂರು ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎರಡನೇ ವೇದಿಕೆಯಲ್ಲಿ ಹಾಲಿ ಶಾಸಕ ಸಂಸದರಿಗೆ ಹಾಗೂ ಮೂರನೇ ವೇದಿಕೆಯಲ್ಲಿ ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಬಿಜೆಪಿ ಅಧ್ಯಕ್ಷರುಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ಮಾಡಲಿದ್ದಾರೆ.
ಮೋದಿ ಕಾರ್ಯಕ್ರಮದ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಿದ್ದು. ಬಾಂಬ್ ಪತ್ತೆ ದಳ ನಿರಂತರ ತಪಾಸನೆ, ಹತ್ತಾರು ಸಲ ಸುತ್ತಾಡುತ್ತಿರುವ ಸೇನಾ ಹೆಲಿಕಾಪ್ಟರ್. ಮಹಾಸಂಗಮ ನಡೆಯುವ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ, ಬ್ಲಾಕ್ ಶರ್ಟ್, ನೀರಿನ ಬಾಟಲ್, ಬ್ಯಾಗ್ಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಸಮಾವೇಶಕ್ಕೆ ಬರುವ ಜನರನ್ನು ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಇನ್ನು ಎಂಟು ಜನ ಎಸ್.ಪಿ ಮತ್ತು ಎ.ಎಸ್.ಪಿಗಳು, ಡಿವೈಎಸ್ಪಿ 32, ಇನ್ಸ್ಪೆಕ್ಟರ್ಗಳು 85, ಹೋಮ್ ಗಾರ್ಡ್ಸ್ 900 ಸೇರಿದಂತೆ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ನಡೆಸುವ ಸ್ಥಳದಲ್ಲಿ ಒಬ್ಬ ಎಸ್ಪಿ ಇರಲಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ