ಬೆಳಗಾವಿ, ಅಕ್ಟೋಬರ್ 18: ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎರಡನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ರೆಡಿ ಆಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದರು. ಇದಕ್ಕೆ ಬೆಳಗಾವಿಯಲ್ಲಿ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ನಳಿನ್ ಕುಮಾರ್ ಕಟೀಲ್, ಹೆಚ್‌ಡಿ ಕುಮಾರಸ್ವಾಮಿ ಏನು ಜಡ್ಜರಾ ಎಂದು ಪ್ರಶ್ನಿಸಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿಯೂ ಜಡ್ಜ್ ಅಲ್ಲ, ಕಟೀಲ್ ಸಹ ಅಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕ ಸಿಟಿ ರವಿಗೆ ಲೂಟಿ ರವಿ ಎಂದು ಹೆಸರು ಕೊಟ್ಟಿದ್ದೇ ಅವರ ಪಕ್ಷದವರು. ಯಾರು ಯಾರು ಏನು ಮಾತನಾಡಿದ್ದಾರೆ ಎಂಬ ದಾಖಲೆ ನನ್ನ ಬಳಿ ಇವೆ. ಮುಂದೆ ಸಮಯ ಬರಲಿ, ಎಲ್ಲವನ್ನೂ ಹೇಳುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಇಂಡಿಯಾ ಮೈತ್ರಿಕೂಟ ಬೆಂಬಲಿಸುವ ಹೇಳಿಕೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮಹದಾಯಿ ಯೋಜನೆ ಜಾರಿಗೆಗೆ ಎದುರಾಗಿರುವ ಅಡೆತಡೆಗಳನ್ನು ಕೇಂದ್ರ ಸರ್ಕಾರವೇ ನಿವಾರಿಸಬೇಕು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಮಹಾದಾಯಿ ಯೋಜನೆ ಜಾರಿ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ಈ ಎಲ್ಲ ಅಡೆತಡೆಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ನಿವಾರಿಸಬೇಕು. ಕಾವೇರಿ ನದಿ ನೀರು ವಿವಾದ ಸಂಬಂಧ ನಾವು ವ್ಯಸ್ತರಾಗಿದ್ದೆವು. ಮೇಕೆದಾಟು ಯೋಜನೆಯಂತೆ ಮಹದಾಯಿಯನ್ನೂ ಆದ್ಯತೆ ಮೇರೆಗೆ ಜಾರಿಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೆಚ್ಚಾಯ್ತು ಬಿಜೆಪಿ, ಕಾಂಗ್ರೆಸ್ ವಾಕ್ಸಮರ: ಆರೋಪಗಳಿಗೆ ಟಕ್ಕರ್ ಕೊಡಲು ಆಪ್ತರಿಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಯೇನು?
ಹಿಂದಿನ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ಜಾರಿ ಆಗಿಯೇ ಬಿಟ್ಟಿತು ಎಂದಿತ್ತು. ಎಲ್ಲ ಕಡೆಯೂ ಸಂಭ್ರಮಾಚರಣೆ ಕೂಡ ಮಾಡಿದ್ದರು. ಆದರೆ ಇಲ್ಲಿ ಕೆಲಸ ಮಾಡಲಿಲ್ಲ. ತಕ್ಷಣವೇ ಕೇಂದ್ರ ಸರ್ಕಾರ ಅಡೆ ತಡೆಗಗಳನ್ನು ನಿವಾರಿಸಿ ನಮಗೆ ಅನುಕೂಲ ಮಾಡಿಕೊಡಬೇಕು. ಮಹದಾಯಿ ಯೋಜನೆ ಜಾರಿಗೆಗೆ ನಮ್ಮ ಸರ್ಕಾರ ಇಚ್ಛಾಶಕ್ತಿ ಹೊಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ