ಬೆಂಗಳೂರು, (ಜುಲೈ 19): ಬಿಜೆಪಿ(BJP) ಜೊತೆ ಸಖ್ಯ ಬೆಳೆಸಲು ಹೆಚ್ಡಿ ಕುಮಾರಸ್ವಾಮಿ(HD Kumaraswamy( ಉತ್ಸುಕರಾಗಿದ್ದಾರೆ. ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯುವುದು ಫಿಕ್ಸ್ ಆಗಿದೆ. ಆದ್ರೆ, ಕಮಲ-ದಳ ದೋಸ್ತಿಗೆ ಕೊಂಚ ವಿಳಂಬವಾಗಲಿದೆ. ಹೌದು…ಎನ್‌ಡಿಎ(NDA) ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ನಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಇಂದಿನ ತಮ್ಮ ದೆಹಲಿ ಪ್ರವಾಸ ಸೋಮವಾರಕ್ಕೆ ಮುಂದೂಡಿದ್ದಾರೆ. ಇದರೊಂದಿಗೆ ಬಿಜೆಪಿ ಜೊತೆಗಿನ ಮೈತ್ರಿ ಮಾಡಿಕೊಳ್ಳಲು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಎನ್‌ಡಿಎ ಮೈತ್ರಿಕೂಟ ಸಭೆಯಿಂದ ದೂರ ಉಳಿದ ಕುಮಾರಸ್ವಾಮಿ, ಸಂಚಲನ ಮೂಡಿಸಿದ ದಳಪತಿಗಳ ನಡೆ
ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದರೆ ಕೆಲ ಸಮುದಾಯಗಳ ನೇರ ವಿರೋಧ ಕಟ್ಟಿಕೊಳ್ಳಬೇಕು. ಇದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಕಷ್ಟವಾಗುತ್ತದೆ. ಹೀಗಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಈ ಹಿಂದೆ ಕಾಂಗ್ರೆಸ್ ಜೊತೆ ನೇರ ಒಪ್ಪಂದ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತವಾದವು ಎನ್ನುವ ಅಭಿಪ್ರಾಯಗಳನ್ನು ಕೆಲ ಜೆಡಿಎಸ್ ಶಾಸಕರು ಮೊನ್ನೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಮೈತ್ರಿ ಬದಲು ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಎರಡರಿಂದ ಮೂರು ಸ್ಥಾನ ಗೆಲ್ಲಲು ಅವಕಾಶವಿದೆ. ಬಿಜೆಪಿ ಜೊತೆ ಕೈಜೋಡಿಸಿದರೆ ಕಾಂಗ್ರೆಸ್ಗೆ ಅಸ್ತ್ರವಾದಂತಹಾಗುತ್ತದೆ. ಮೈತ್ರಿಯ ವಿಚಾರವನ್ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಇದರಿಂದ ಹಳೆ ಮೈಸೂರು ಭಾಗದಲ್ಲಿ ಮತ್ತೆ ಜೆಡಿಎಸ್ ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು ಎಂದಿದ್ದಾರೆ. ಈ ಮೂಲಕ ಶಾಸಕರು ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈತಿಯ ವಿಚಾರವಾಗಿ ಸದ್ಯಕ್ಕೆ ಶಾಸಕರಿಂದ ಸಂಪೂರ್ಣ ಒಮ್ಮತ ಮೂಡಿಬರದ ಕಾರಣ ದಳಪತಿಗಳು ಸದ್ಯಕ್ಕೆ ಬಿಜೆಪಿಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಎನ್‌ಡಿಎ ಮೈತ್ರಿಕೂಟವನ್ನ ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿ, ಕರ್ನಾಟಕದಲ್ಲಿ ಜೆಡಿಎಸ್‌ಗೂ ಗಾಳ ಹಾಕಿದೆ. ಇದಕ್ಕೆ ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದ್ರೆ, ಇದೀಗ ಪಕ್ಷದಲ್ಲಿ ಒಮ್ಮತ ಮೂಡದ ಕಾರಣ ಮೈತ್ರಿ ಬಗ್ಗೆ ಹೆಚ್ಡಿಕೆ ಇನ್ನಷ್ಟು ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ