Delhi Mayor Election: ಎಎಪಿ ಹಾಗೂ ಬಿಜೆಪಿ ಸದಸ್ಯರಿಗೆ ರಣರಂಗವಾದ ದೆಹಲಿ ಮೇಯರ್ ಚುನಾವಣಾ ವೇದಿಕೆ

| Updated By: ನಯನಾ ರಾಜೀವ್

Updated on: Jan 06, 2023 | 1:05 PM

ದೆಹಲಿ ಮಹಾನಗರಪಾಲಿಕೆ ಮೇಯರ್ ಚುನಾವಣೆಯು ಎಎಪಿ ಹಾಗೂ ಬಿಜೆಪಿ ಸದಸ್ಯರ ನಡುವೆ ಭಾರಿ ವಿವಾದಕ್ಕೆ ಕಾರಣವಾಗಿದೆ.

Delhi Mayor Election: ಎಎಪಿ ಹಾಗೂ ಬಿಜೆಪಿ ಸದಸ್ಯರಿಗೆ ರಣರಂಗವಾದ ದೆಹಲಿ ಮೇಯರ್ ಚುನಾವಣಾ ವೇದಿಕೆ
ದೆಹಲಿ ಮೇಯರ್ ಚುನಾವಣೆ
Follow us on

ದೆಹಲಿ ಮಹಾನಗರಪಾಲಿಕೆ ಮೇಯರ್ ಚುನಾವಣೆಯು ಎಎಪಿ ಹಾಗೂ ಬಿಜೆಪಿ ಸದಸ್ಯರ ನಡುವೆ ಭಾರಿ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಮಹಾನಗರ ಪಾಲಿಕೆಗೆ 10 ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ. ಮೇಯರ್ ಚುನಾವಣೆ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ವಿಷಯ ತಜ್ಞರಲ್ಲದವರನ್ನು ಮಹಾನಗರ ಪಾಲಿಕೆಗೆ ನಾಮ ನಿರ್ದೇಶನ ಮಾಡಿರುವ ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಎಎಪಿ ಸದಸ್ಯರು ಘೋಷಣೆ ಕೂಗಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಮೇಯರ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶುಕ್ರವಾರ ಮಹಾನಗರ ಪಾಲಿಕೆ ಸಭೆ ಆರಂಭವಾಯಿತು. ಪ್ರಮಾಣವಚನ ಭೋದಿಸುವ ಜವಾಬ್ದಾರಿ ಹೊತ್ತಿದ್ದ ಸತ್ಯ ಶರ್ಮಾ ಅವರು ರಾಜ್ಯಪಾಲರು ನೇಮಿಸಿದ್ದ ಪ್ರತಿನಿಧಿಗಳಿಗೆ ಪ್ರಮಾಣವಚನ ಭೋದಿಸಲು ಆರಂಭಿಸಿದಾಗ ಎಎಪಿ ಸದಸ್ಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯ ಯಾವುದೇ ವಿಷಯ ತಜ್ಞರಾಗಿರದಿದ್ದರೂ ಬಿಜೆಪಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ರಾಜ್ಯಪಾಲರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಹಾಗೂ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೂಡ ಪತ್ರ ಬರೆದಿದ್ದರು.

ರಾಜ್ಯಸರ್ಕಾರವನ್ನು ಕಡೆಗಣಿಸಿ ಯಾವುದೇ ಅಭಿಪ್ರಾಯವನ್ನು ಪಡೆಯದೇ, ಏಕಪಕ್ಷೀಯವಾಗಿ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ದೆಹಲಿ ಸರ್ಕಾರದ ಆರೋಪವಾಗಿದೆ.

250 ವಾರ್ಡ್​ಗಳನ್ನು ಹೊಂದಿರುವ ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿ 134 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ 104 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ 9 ಸೀಟುಗಳನ್ನು ಪಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ