ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಸಮಾಧಾನಗಳನ್ನು ಆಲಿಸಿ ಪರಿಹಾರ ಸೂಚಿಸಿದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ಶಮನಗೊಂಡಿಲ್ಲ. ಸಭೆ ಕರೆಯುವಂತೆ ಒತ್ತಾಯಿಸಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಶಾಸಕರು ಕ್ಷಮೆ ಕೇಳಿದ್ದಾರೆ ಎಂಬ ಗೃಹ ಸಚಿವ ಜಿ. ಪರಮೇಶ್ವರ (G Parameshwara) ಅವರ ಹೇಳಿಕೆಗೆ ಇದೀಗ ಮತ್ತೆ ಅಸಮಾಧಾನಕ್ಕೆ ಕಾರಣವಾಗಿದೆ. ಪರಮೇಶ್ವರ ಹೇಳಿಕೆಗೆ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಪರಮೇಶ್ವರ ಅವರಿಗೆ ರಾಯರೆಡ್ಡಿ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆ ಎಂದು ನೀವು ಹೇಳಿರುವುದು ತಪ್ಪು. ನಾವು ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ ಎಂದು ರಾಯರೆಡ್ಡಿ ಅವರು ಪರಮೇಶ್ವರ ಅವರಿಗೆ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ನಮ್ಮ ಸಮಸ್ಯೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಸಕರಿಗೆ ಗೌರವ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಿಳಿಸಿದ್ದಾರೆ. ಈ ರೀತಿ ಪತ್ರ ಬರೆದು ಮುಜುಗರ ಮಾಡಬೇಡಿ ಎಂದು ಹೇಳಿದ್ದಾರೆ. ಹಾಗೆಂದು ನಾವು ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳುವ ಪ್ರಸಂಗ ಬರುವುದಿಲ್ಲ. ತಮ್ಮ ಈ ಹೇಳಿಕೆಯಿಂದ ಶಾಸಕರಾದ ನಮಗೆ ಅವಮಾನವಾಗುತ್ತದೆ. ಸತ್ಯಕ್ಕೆ ದೂರವಾದ ಹೇಳಿಕೆ ನೀಡಬೇಡಿ ಎಂದು ರಾಯರೆಡ್ಡಿ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Congress CLP Meeting: ಬಸವರಾಜ ರಾಯರೆಡ್ಡಿಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ
ರಾಯರೆಡ್ಡಿ ನೇತೃತ್ವದಲ್ಲಿ ಕೆಲವು ಮಂದಿ ಸಚಿವರು ಸಿದ್ದರಾಮಯ್ಯ ಅವರಿಗೆ ಬರೆದ ಬಹಿರಂಗ ಪತ್ರ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತ್ತು. ಪತ್ರವನ್ನು ಅಸ್ತ್ರವನ್ನಾಗಿಸಿಕೊಂಡಿದ್ದ ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಸಚಿವರು ಕಮಿಷನ್ಗೆ ಬೇಡಿಕೆ ಇಡುತ್ತಿದ್ದಾರೆ ಎಂದೆಲ್ಲ ವಿಪಕ್ಷಗಳು ಟೀಕಿಸಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ