ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್:​ ಪೊಲೀಸರ ಕ್ರಮ ಒಪ್ಪಿ ಈಗ ಬಂಧಿತರು ಅಮಾಯಕರು ಎಂದರೆ ಹೇಗೆ: ಬೊಮ್ಮಾಯಿ ಪ್ರಶ್ನೆ

| Updated By: Rakesh Nayak Manchi

Updated on: Jan 07, 2024 | 3:29 PM

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಅಮಾಯಕರು ಎಂಬ ನಿರ್ಣಯಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಎರಡು ಪೊಲೀಸ್​ ಠಾಣೆಗಳಿಗೆ ಬೆಂಕಿ ಹಚ್ಚಿದವರು ಅಮಾಯಕರಾ? ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತಾರಾ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್:​ ಪೊಲೀಸರ ಕ್ರಮ ಒಪ್ಪಿ ಈಗ ಬಂಧಿತರು ಅಮಾಯಕರು ಎಂದರೆ ಹೇಗೆ: ಬೊಮ್ಮಾಯಿ ಪ್ರಶ್ನೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ಕ್ರಮ ಒಪ್ಪಿ ಈಗ ಬಂಧಿತರು ಅಮಾಯಕರು ಎಂದರೆ ಹೇಗೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಬಸವರಾಜ್ ಬೊಮ್ಮಾಯಿ
Follow us on

ಹಾವೇರಿ, ಜ.7: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ (DJ Halli, KG Halli Riots) ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಅಮಾಯಕರು ಎಂಬ ನಿರ್ಣಯಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಕ್ರೋಶ ಹೊರಹಾಕಿದ್ದಾರೆ. ಎರಡು ಪೊಲೀಸ್​ ಠಾಣೆಗಳಿಗೆ ಬೆಂಕಿ ಹಚ್ಚಿದವರು ಅಮಾಯಕರಾ? ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತಾರಾ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರ ಕ್ರಮ ಸರಿ ಅಂತಾ ಕಾಂಗ್ರೆಸ್​ನವರೇ ಒಪ್ಪಿದ್ದಾರೆ. ಈಗ ಸಂಪುಟದಲ್ಲಿ ವರದಿ ಒಪ್ಪಿ ಅಮಾಯಕರು ಇದ್ದಾರೆ ಅಂದರೆ ಹೇಗೆ. ಇದು ಕಾಂಗ್ರೆಸ್​ನ ದ್ವಂದ್ವ ಧೋರಣೆ ಹಾಗೂ ಓಲೈಕೆ ರಾಜಕಾರಣವಾಗಿದೆ. ಕಾಂಗ್ರೆಸ್​​ನವರು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣವನ್ನು​ ವೀಕ್​ ಮಾಡುತ್ತಿದ್ದಾರೆ. ಅಮಾಯಕರು ಅಂತಾ ತೀರ್ಮಾನ ಮಾಡುವವರು ಯಾರು? ಬಂಧಿತರ ಅಮಾಯಕರೋ ಅಥವಾ ಆರೋಪಿಗಳೋ ಅಂತಾ ಕೋರ್ಟ್​ ತೀರ್ಮಾನ ಮಾಡಲಿ ಎಂದರು.

ಇದನ್ನೂ ಓದಿ: ಜನಸ್ಪಂದನ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡುವಂತೆ ಡಿಕೆ ಶಿವಕುಮಾರ್​ಗೆ ಕುಟುಂಬಸ್ಥರ ಮನವಿ

ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್​ ಹೇಳಿಕೆಗೆ ಆಕ್ರೋಶ ಹೊರಹಾಕಿದ ಬೊಮ್ಮಾಯಿ, ಮೊದಲು ಬಿ.ಕೆ.ಹರಿಪ್ರಸಾದ್​ಗೆ ಸಮನ್ಸ್​ ಜಾರಿ ಮಾಡಲಿ. ಇದೇ ರೀತಿ ಬಿಜೆಪಿಯವರು ಮಾತನಾಡಿದ್ದಿದ್ದರೆ ಸುಮ್ಮನೆ ಬಿಡುತ್ತಿದ್ದಿರಾ ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ರಾಷ್ಟ್ರ ರಾಜಕಾರಣ ಪ್ರವೇಶ

ಬಸವರಾಜ ಬೊಮ್ಮಾಯಿ ರಾಷ್ಟ್ರ ರಾಜಕಾರಣ ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಸ್ಪರ್ಧಿಸುತ್ತೇನೆಂದು ಹೇಳಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯಾರೂ ಹೇಳಿಲ್ಲ. ಉಹಾಪೋಹದ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ ಎಂದರು. ಬಿಜೆಪಿ ವಿರುದ್ಧವೇ ಮಾಜಿ ಸಚಿವ ಸೋಮಣ್ಣ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಸೋಮಣ್ಣರ ನೋವೇನಿದೆ ಅಂತಾ ಎಲ್ಲರು ಒಟ್ಟಿಗೆ ಕೂತು ಮಾತಾಡುತ್ತೇವೆ ಎಂದರು.

ಅನ್ಯಾಯದ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ಕೇಸ್

ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿಯ 43 ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಇದು ದಬ್ಬಾಳಿಕೆಯ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು. ಅನ್ಯಾಯದ ಬಗ್ಗೆ ಧ್ವನಿ ಎತ್ತಿದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಉಳಿದಿಲ್ಲ, ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದರು.

ಶ್ರೀಕಾಂತ್ ಪೂಜಾರಿ ಬಂಧಿಸುವುದಕ್ಕೆ ಅವರ ಮೇಲೆ ಕೇಸ್​ಗಳೇ ಇಲ್ಲ. ರಾಜಕೀಯ ದ್ವೇಷಕ್ಕೆ ಪೊಲೀಸ್ ಇಲಾಖೆ ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಭಯ, ಅಶಾಂತಿ ಸೃಷ್ಟಿಸಲಾಗುತ್ತಿದೆ. ಸಾಮರಸ್ಯ ಇರುವ ರಾಜ್ಯದಲ್ಲಿ ವೋಟಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವರದಿ: ರವಿ ಹೂಗಾರ್, ಟಿವಿ9 ಹಾವೇರಿ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ