ಜೆಡಿಎಸ್ ಶಾಸಕರಿಗೆ ಡಿಕೆ ಸಹೋದರರ ಗಾಳ: ಹಳೇ ಮೈಸೂರು ಭಾಗದಲ್ಲಿ ಹಿಡಿತಕ್ಕಾಗಿ ಆಪರೇಷನ್ ಹಸ್ತ!

| Updated By: Ganapathi Sharma

Updated on: Nov 02, 2023 | 9:56 PM

ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಕೆ ಸಹೋದರರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಜೆಡಿಎಸ್ ಶಾಸಕರಿಗೆ ಗಾಳ ಹಾಕಲು ಖುದ್ದು ಅಖಾಡಕ್ಕೆ ಇಳಿದಿರುವ ಡಿಕೆ ಶಿವಕುಮಾರ್, ಹೆಚ್​ಡಿ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಕಸರತ್ತು ನಡೆಸುತ್ತಿದ್ದಾರೆ.

ಜೆಡಿಎಸ್ ಶಾಸಕರಿಗೆ ಡಿಕೆ ಸಹೋದರರ ಗಾಳ: ಹಳೇ ಮೈಸೂರು ಭಾಗದಲ್ಲಿ ಹಿಡಿತಕ್ಕಾಗಿ ಆಪರೇಷನ್ ಹಸ್ತ!
ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್
Follow us on

ಬೆಂಗಳೂರು, ನವೆಂಬರ್ 1: ಕಾಂಗ್ರೆಸ್ ಸರ್ಕಾರ (Congress Government) ಪತನಗೊಳಿಸುವುದಕ್ಕಾಗಿ ಬಿಜೆಪಿಯವರು ಆಪರೇಷನ್​ಗೆ ಮುಂದಾಗಿದ್ದಾರೆ. ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಆದರೆ, ಪಕ್ಷವನ್ನು ಸದೃಢಗೊಳಿಸುವುದಕ್ಕಾಗಿ, ಆಯಕಟ್ಟಿನ ಜಾಗದಲ್ಲಿ ಪಕ್ಷ ಸಂಘಟನೆ ಮಾಡಲು ಡಿಕೆ ಸಹೋದರರೇ ಆಪರೇಷನ್​​ಗೆ ಇಳಿದಿದ್ದಾರೆ ಎಂಬ ಮಾಹಿತಿ ‘ಟಿವಿ9’ಗೆ ದೊರೆತಿದೆ. ಮುಖ್ಯವಾಗಿ ಡಿಕೆ ಸಹೋದರರು ಜೆಡಿಎಸ್ (JDS) ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಕೆ ಸಹೋದರರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಜೆಡಿಎಸ್ ಶಾಸಕರಿಗೆ ಗಾಳ ಹಾಕಲು ಖುದ್ದು ಅಖಾಡಕ್ಕೆ ಇಳಿದಿರುವ ಡಿಕೆ ಶಿವಕುಮಾರ್, ಹೆಚ್​ಡಿ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಕಸರತ್ತು ನಡೆಸುತ್ತಿದ್ದಾರೆ. ಹಳೆ ಮೈಸೂರು ಭಾಗದ ಜಿಲ್ಲೆಗಳಾದ ತುಮಕೂರು, ಮಂಡ್ಯ ಮೈಸೂರು, ಕೋಲಾರ, ಚಾಮರಾಜನಗರ ಜಿಲ್ಲೆಯ ಜೆಡಿಎಸ್ ಶಾಸಕರನ್ನು ಸಂಪರ್ಕ ಮಾಡುವ ಮೂಲಕ ಆಪರೇಷನ್ ಪ್ಲಾನ್ ರೂಪಿಸುತ್ತಿದ್ದಾರೆ.

ಜೆಡಿಎಸ್​ ಶಾಸಕರೇ ಪ್ರಮುಖ ಟಾರ್ಗೆಟ್: ಕಾರಣವೇನು?

ಜೆಡಿಎಸ್ ಪಕ್ಷದ ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ಸೇರಿ ಬರೋಬ್ಬರಿ ಎಂಟು ಶಾಸಕರ ಸಂಪರ್ಕ ಮಾಡಿ ಮಾತುಕತೆಗೆ ತಯಾರಿ ನಡೆಸುತ್ತಿರುವ ಡಿಕೆ ಶಿವಕುಮಾರ್, ಕಾಂಗ್ರೆಸ್ ಬರುವ ಶಾಸಕರಿಗೆ ದೊಡ್ಡ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಡಿಕೆ ಸಹೋದರರು ಜೆಡಿಎಸ್ ಶಾಸಕರನ್ನೇ ಗುರಿಯಾಗಿಸಲು ಕಾರಣವಾಗಿದ್ದು ಬಿಜೆಪಿ, ಜೆಡಿಎಸ್ ಮೈತ್ರಿ ಎನ್ನಲಾಗಿದೆ.

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಹೆಚ್ಚು ಸ್ಥಾನ ಗೆಲ್ಲಲು ಅವಕಾಶವಾಗುತ್ತದೆ. ಇದರಿಂದ ಕಾಂಗ್ರೆಸ್​ಗೆ ನೇರವಾಗಿ ಹೊಡೆತ ಬೀಳುತ್ತದೆ. ಹೀಗಾಗಿ ಈಗಿನಿಂದಲೇ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ಸೆಳೆದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಸಂಪೂರ್ಣ ಕುಗ್ಗಿಸಲು ಡಿಕೆಶಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಜೆಡಿಎಸ್ ಶಾಸಕರ ಆಪರೇಷನ್ ಮಾತುಕತೆ‌ ನಡೆಸುತ್ತಿರುವ ಡಿಕೆ ಸಹೋದರರು ಕನಿಷ್ಠ 5 ಜೆಡಿಎಸ್ ಶಾಸಕರನ್ನು ಸೆಳೆಯಲು ತೆರೆ ಮರೆಯಲ್ಲಿ ಭರ್ಜರಿ ಕಸರತ್ತು ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ: ಡಿಸಿಎಂ ಹೇಳಿದ್ದಿಷ್ಟು…

ಇನ್ನು ತುಮಕೂರಿನಲ್ಲಿ ಆಪರೇಷನ್​ಗೆ ಡಿಸಿಎಂ ಡಿಕೆಶಿ ಅವರ ಸಂಬಂಧಿ, ಡಾ.ರಂಗನಾಥ್​ ಕೂಡಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ಆಪರೇಷನ್ ಮಾಡುತ್ತಿರುವುದನ್ನು, ನಾಯಕರನ್ನು ಭೇಟಿ ಮಾಡುತ್ತಿರುವುದನ್ನು ಖುದ್ದು ಶಾಸಕ ರಂಗನಾಥರೇ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಬಹಳಷ್ಟು ಜನ ಕಾಂಗ್ರೆಸ್​ಗೆ ಬರುತ್ತಾರೆ ಎಂದಿದ್ದಾರೆ.

ಸದ್ಯ ಡಿಕೆ ಶಿವಕುಮಾರ್ ಸಂಪರ್ಕ ಮಾಡಿರುವ ಜೆಡಿಎಸ್ ಶಾಸಕರು ಪಕ್ಷ ಬಿಡುವ ಬಗ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ. ಅಷ್ಟೇ ಅಲ್ಲದೆ ಆಪರೇಷನ್ ಹಸ್ತದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಕುಮಾರಸ್ವಾಮಿ, ಡಿಕೆ ಸಹೋದರರಿಗೆ ತಿರುಗೇಟು ನೀಡಲು ತಂತ್ರ ಹೂಡುತ್ತಿದ್ದಾರೆ.

ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ