ರೈತರ ಆತ್ಮಹತ್ಯೆ: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪ ಸುಳ್ಳು: ಸಚಿವ ಎನ್​ ಚಲುವರಾಯಸ್ವಾಮಿ, ಅಂಕಿ ಅಂಶ ಬಿಡುಗಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 7:44 PM

ಹಾವೇರಿ ಜಿಲ್ಲೆಯಲ್ಲಿ18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪ ಸುಳ್ಳು. ಜಿಲ್ಲೆಯಲ್ಲಿ 6 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಹೇಳಿದ್ದಾರೆ.

ರೈತರ ಆತ್ಮಹತ್ಯೆ: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪ ಸುಳ್ಳು: ಸಚಿವ ಎನ್​ ಚಲುವರಾಯಸ್ವಾಮಿ, ಅಂಕಿ ಅಂಶ ಬಿಡುಗಡೆ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಚಿವ ಎನ್​.ಚಲುವರಾಯಸ್ವಾಮಿ
Follow us on

ಬೆಂಗಳೂರು, ಜುಲೈ 17: ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ (N chaluvaraya swamy) ತಿರುಗೇಟು ನೀಡಿದ್ದು, ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 6 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು. ಇದು ಅಧಿಕಾರಿಗಳು, ಪೊಲೀಸ್ ವರದಿಗಳಿಂದ ಬಂದಿರುವ ಮಾಹಿತಿ ಎಂದು ರೈತರ ಆತ್ಮಹತ್ಯೆ ಪ್ರಕರಣದ ಅಂಕಿ ಅಂಶ ಬಿಡುಗಡೆ ಮಾಡಿದರು.

ರೈತರ ಆತ್ಮಹತ್ಯೆ ಕೇಸ್​​ನಲ್ಲೂ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ

ವಿಧಾನಸೌಧದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯೂ ಜಾಸ್ತಿ ಆಗಿದ್ದು, ಶೇಕಡಾ 80ರಷ್ಟು ಬಿತ್ತನೆ ಕಾರ್ಯ ಆಗಿದೆ. ರಸಗೊಬ್ಬರ, ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ, ಅಲ್ಲಿ ಗಲಾಟೆ ಆಗಿಲ್ಲ. ಒಬ್ಬ ರೈತನ ಸಾವಿಗೂ ಬೆಲೆ ಇದೆ, ಎಲ್ಲರ ಜೀವಕ್ಕೂ ಬೆಲೆ‌ ಇದೆ. ರೈತರ ಆತ್ಮಹತ್ಯೆ ಕೇಸ್​​ನಲ್ಲೂ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ. ಪಕ್ಷಾತೀತವಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಹಣಕ್ಕಾಗಿ ಹುದ್ದೆಯಲ್ಲಿ 500 ಕೋಟಿ ರೂಪಾಯಿ ಡೀಲ್: ಹೆಚ್​ಡಿ ಕುಮಾರಸ್ವಾಮಿ ಆರೋಪ

ರೈತರ ಆತ್ಮಹತ್ಯೆ ಪ್ರಕರಣದ ಅಂಕಿ-ಅಂಶ

2018-19ರಲ್ಲಿ 1085 ರೈತರು, 2019-20ರಲ್ಲಿ 1091 ರೈತರು, 2020-21ರಲ್ಲಿ 855 ರೈತರು, 2021-22ರಲ್ಲಿ 915 ರೈತರ ಆತ್ಮಹತ್ಯೆ ಆಗಿದೆ. 2022-23ರಲ್ಲಿ 755 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ 1ರಿಂದ ಈವರೆಗೆ 96 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಿಲ್ಲ: ಹೆಚ್​.ಡಿ.ಕುಮಾರಸ್ವಾಮಿ 

ರೈತರ ಆತ್ಮಹತ್ಯೆ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಮಾತನಾಡಿದ್ದು, 5 ಅಷ್ಟೇ ಅಲ್ಲ, ಇನ್ನೂ 5 ಗ್ಯಾರಂಟಿ ಕೊಡಲಿ ನಮ್ಮ ಬೆಂಬಲವಿದೆ. ಆದರೆ ಶಿಸ್ತುಬದ್ಧವಾಗಿ ತೆಗೆದುಕೊಂಡು ಹೋಗುವ ವಾತಾವರಣ ಇಲ್ಲ. ಆತ್ಮಹತ್ಯೆಗೆ ಶರಣಾದವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿಲ್ಲ. ನಾವಿದ್ದೇವೆ ಎನ್ನುವ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಿಲ್ಲ.

ಇದನ್ನೂ ಓದಿ: ಎನ್​ಡಿಎ ಜತೆ ಮೈತ್ರಿ ಬಗ್ಗೆ ಮಾಹಿತಿ ಇಲ್ಲ, ವಿಪಕ್ಷಗಳ ಸಭೆಗೆ ಆಹ್ವಾನ ಏಕೆ ಇಲ್ಲ ಗೊತ್ತಿಲ್ಲ: ಹೆಚ್​ಡಿ ಕುಮಾರಸ್ವಾಮಿ

ಬರೀ ಗ್ಯಾರಂಟಿಗಳ ಕಥೆ ಹೇಳಿಕೊಂಡು ಕಾಂಗ್ರೆಸ್​​ನವರು ಹೊರಟಿದ್ದಾರೆ. ಇತಿಹಾಸದಲ್ಲೇ ಆಗದ ವರ್ಗಾವಣೆ ಲೂಟಿ ಈ ಎರಡೇ ತಿಂಗಳಲ್ಲಿ ಆಗಿದೆ. ಆ‌ ಕೋಟ್ಯಂತರ ದುಡ್ಡು ವಸೂಲಿ ಜನಸಾಮಾನ್ಯರ ಮೇಲೆ ಬೀಳಲಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.