ರಾಮನಗರ ಜಿಲ್ಲೆಯ ಅಭಿವೃದ್ಧಿ ಸಂಬಂಧ ವಿಧಾನಸಭೆಯಲ್ಲಿ ಜಟಾಪಟಿ; ಅಶ್ವತ್ಥ್‌ರನ್ನು ನಾಟಕಕಾರ ಎಂದ ರಾಜಣ್ಣ

ಘನಂದಾರಿ ಅಂತಾ ನಿಮ್ಮಿಂದ ಕಲಿಯಬೇಕಿಲ್ಲ ಎಂದ ರಾಜಣ್ಣ, ರೀ ಅಧ್ಯಕ್ಷರೇ ಸರಿಯಾಗಿ ಮಾತಾಡೋಕೆ ಹೇಳಿ, ಇವರದ್ದು ನಾಟಕ ಕಂಪನಿ. ವರದ್ದು ಬಯಲಾಟ ಎಂದರು.

ರಾಮನಗರ ಜಿಲ್ಲೆಯ ಅಭಿವೃದ್ಧಿ ಸಂಬಂಧ ವಿಧಾನಸಭೆಯಲ್ಲಿ ಜಟಾಪಟಿ; ಅಶ್ವತ್ಥ್‌ರನ್ನು ನಾಟಕಕಾರ ಎಂದ ರಾಜಣ್ಣ
ಡಾ. ಅಶ್ವತ್ಥ್‌ ನಾರಾಯಣ
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on:Jul 17, 2023 | 8:53 PM

ಬೆಂಗಳೂರು, ಜುಲೈ 17: ರಾಮನಗರ ಜಿಲ್ಲೆಯ ಅಭಿವೃದ್ಧಿ ಸಂಬಂಧ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಡಾ. ಅಶ್ವತ್ಥ್‌ ನಾರಾಯಣ (CN Ashwath Narayan), ಕಾಂಗ್ರೆಸ್ ಶಾಸಕ ಡಾ. ರಂಗನಾಥ್‌, ಇಕ್ಬಾಲ್ ಹುಸೇನ್‌, ಸಚಿವರಾದ ಕೆಎನ್ ರಾಜಣ್ಣ (KN Rajanna) ಮಧ್ಯೆ ಸೋಮವಾರ ಸದನದಲ್ಲಿ ಜಟಾಪಟಿ ನಡೆಯಿತು. ಈ ಮಧ್ಯೆ, ವಾಕ್ಸಮರ ತಾರಕಕ್ಕೇರಿ, ಅಶ್ವತ್ಥ್‌ ನಾರಾಯಣರನ್ನು ನಾಟಕದ ಕಂಪನಿಯ ನಾಟಕಕಾರ ಎಂದು ಕೆಎನ್ ರಾಜಣ್ಣ ವ್ಯಂಗ್ಯವಾಡಿದರು. ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ನಡೆದ ಚರ್ಚೆ ವೇಳೆ ಮಾತನಾಡಿದ ಅಶ್ವತ್ಥ್ ನಾರಾಯಣ, 60-65 ವರ್ಷಗಳಲ್ಲಿ ಆಗದಿದ್ದನ್ನು 5 ವರ್ಷಗಳಲ್ಲಿ ಮಾಡಿದ್ದೇವೆ ಎಂದರು. ಇದಕ್ಕೆ ಶಾಸಕ ಡಾ. ರಂಗನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ, 5 ವರ್ಷಗಳಲ್ಲಿ ಏನು ಗುಡ್ಡೆ ಹಾಕಿದ್ದೀರಿ? ಸಾಕ್ಷಿ ತೋರಿಸಿ ಎಂದು ಸವಾಲು ಹಾಕಿದರು. ಈ ವೇಳೆ ಇಕ್ಬಾಲ್ ಹುಸೇನ್‌, ರಂಗನಾಥ್‌, ಅಶ್ವತ್ಥ್‌ ನಡುವೆ ವಾಕ್ಸಮರ ಏರ್ಪಟ್ಟಿತು.

ರಾಮನಗರದಲ್ಲಿ ವೈದ್ಯ ಕಾಲೇಜಿಗೆ ತಡೆದಿದ್ದು ನೀವು ಎಂದು ಅಶ್ವತ್ಥ್ ನಾರಾಯಣ ಅವರನ್ನುದ್ದೇಶಿಸಿ ರಂಗನಾಥ್‌ ದೂರಿದರು. 2013ರಲ್ಲಿ ಮೆಡಿಕಲ್ ಕಾಲೇಜಿಗೆ ತಡೆ ಹಾಕಿದ್ದು ಏಕೆ ಎಂದು ಪ್ರಶ್ನಿಸಿದರು. ರಾಮನಗರದಲ್ಲಿ ಗಂಡಸರು ಯಾರಿದ್ದಾರೆ ಕರೆಯಿರಿ ಅಂದಿದ್ದರು. ಈಗ 2023ಕ್ಕೆ ಗಂಡಸರು ಬಂದಿದ್ದಾರೆ ಕೆಲಸ ಮಾಡ್ತಾರೆ ಎಂದು ರಂಗನಾಥ್ ಹೇಳಿದರು.

ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಸಹಕಾರ ಸಚಿವ ರಾಜಣ್ಣ, ಅಶ್ವತ್ಥ್‌ ನಾರಾಯಣ ಎಲ್ಲಾ ವಿಷಯಗಳಲ್ಲೂ ಅನುಭವ ಇರುವವರು. ಆದ್ರೆ ಅವರ ಮಾತು ಬಯಲಾಟದಂತಿದೆ. ಜನರ ಮುಂದೆ ಈ ಆಟ ಆಡಿದ್ರೆ ಆನಂದಿಸಬಹುದಲ್ವಾ ಎಂದು ವ್ಯಂಗ್ಯವಾಡಿದರು. ಇದರಿಂದ ಕೆರಳಿದ ಅಶ್ವತ್ಥ್‌ ನಾರಾಯಣ, ನೀವು ಬಹಳ ಘನಂದಾರಿ ಇರುವಂತಹ ವ್ಯಕ್ತಿ ಅಲ್ವಾ ಎಂದು ಕುಹಕವಾಡಿದರು.

ಘನಂದಾರಿ ಅಂತಾ ನಿಮ್ಮಿಂದ ಕಲಿಯಬೇಕಿಲ್ಲ ಎಂದ ರಾಜಣ್ಣ, ರೀ ಅಧ್ಯಕ್ಷರೇ ಸರಿಯಾಗಿ ಮಾತಾಡೋಕೆ ಹೇಳಿ, ಇವರದ್ದು ನಾಟಕ ಕಂಪನಿ. ವರದ್ದು ಬಯಲಾಟ ಎಂದರು. ನೀವು ಕೈ ತೋರಿಸುತ್ತಿದ್ದೀರಿ, ನಿಮ್ಮದು ಯಾವ ನಾಟಕ ಎಂದು ಅಶ್ವತ್ಥ್ ಮರುಪ್ರಶ್ನೆ ಹಾಕಿದರು. ಮಧ್ಯ ಪ್ರವೇಶಿಸಿದ ಕುಣಿಗಲ್ ಶಾಸಕ ರಂಗನಾಥ್‌, ನಿಮ್ಮ ಸಾಕ್ಷಿ ಶೂನ್ಯ ಎಂದರು. ಈ ಮಧ್ಯೆ, ನೀವು ಶಾಸಕರಾಗಿದ್ದು ಎಲ್ಲಿಂದ ಎಂದು ಅಶ್ವತ್ಥ್‌ಗೆ ಸಚಿವ ಜಮೀರ್ ಕೂಡ ಪ್ರಶ್ನೆ ಹಾಕಿದರು.

ಇದನ್ನೂ ಓದಿ: ಎನ್​ಡಿಎ ಜತೆ ಮೈತ್ರಿ ಬಗ್ಗೆ ಮಾಹಿತಿ ಇಲ್ಲ, ವಿಪಕ್ಷಗಳ ಸಭೆಗೆ ಆಹ್ವಾನ ಏಕೆ ಇಲ್ಲ ಗೊತ್ತಿಲ್ಲ: ಹೆಚ್​ಡಿ ಕುಮಾರಸ್ವಾಮಿ

ಶಾಸಕ ಅಶ್ವತ್ಥ್‌ ಬಹಳ ಭಾವೋದ್ವೇಗಕ್ಕೆ ಒಳಗಾಗಿ ಮಾತಾಡ್ತಿದ್ದಾರೆ. ಅಧ್ಯಕ್ಷರ ಆದೇಶ ಮೀರಿ ಮಾತಾಡುವುದು ಸರಿಯಲ್ಲ ಎಂದು ಹೆಚ್‌ಕೆ ಪಾಟೀಲ್‌ ಹೇಳಿದರು. ವಿಪಕ್ಷಗಳು ದಯಮಾಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಅಷ್ಟರಲ್ಲಿ ಮತ್ತೆ ಸಿಟ್ಟುಗೊಂಡ ಅಶ್ವತ್ಥ್, ನಮ್ಮವರು ಮಾತಾಡುವಾಗ ಆಡಳಿತ ಪಕ್ಷದವರು ಮಧ್ಯಪ್ರವೇಶಿಸಲ್ವಾ ಎಂದರು.

ರಾಮನಗರದಲ್ಲಿ ಮಳೆ ಹಾನಿಗೆ ಪರಿಹಾರ ನೀಡಿಲ್ಲವೆಂದು ಇಕ್ಬಾಲ್ ಹುಸೇನ್ ಆರೋಪಿಸಿದರು. ಇದಕ್ಕುತ್ತರಿಸಿದ ಅಶ್ವತ್ಥ್ ನಾರಾಯಣ, ಯಾರಿಗೆ ಪರಿಹಾರ ಕೊಟ್ಟಿಲ್ಲ ಹೇಳಿ ಎಂದರು. ಈ ನಡುವೆ ಅಶ್ವತ್ಥ್ ನಾರಾಯಣ, ಜಮೀರ್ ಅಹ್ಮದ್ ಮಧ್ಯೆ ಮತ್ತೆ ವಾಕ್ಸಮರ ಏರ್ಪಟ್ಟಿತು. ನಂತರ ಇಬ್ಬರನ್ನೂ ಸಮಾಧಾನಪಡಿಸಿದ ಸ್ಪೀಕರ್ ಯುಟಿ ಖಾದರ್‌, ಇಕ್ಬಾಲ್‌ಗೆ ಮಾತನಾಡಲು ಅವಕಾಶ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Mon, 17 July 23