ನಾಳೆ ನಡೆಯುವ ಎನ್​ಡಿಎ ಸಭೆಯಲ್ಲಿ 38 ಮೈತ್ರಿ ಪಕ್ಷಗಳ ನಾಯಕರು ಭಾಗಿ: ಜೆಪಿ ನಡ್ಡಾ

ದೆಹಲಿಯಲ್ಲಿ ನಾಳೆ ಎನ್‌ಡಿಎ ಮಹತ್ವದ ಸಭೆ ನಡೆಯಲಿದ್ದು, 38 ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ವಿರೋಧ ಪಕ್ಷಗಳ ಮಹಾಘಟಬಂಧನ್​ ಸಭೆಯಲ್ಲಿ 23 ಪಕ್ಷದ ನಾಯಕರು ಭಾಗಿಯಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ನಾಳೆ ನಡೆಯುವ ಎನ್​ಡಿಎ ಸಭೆಯಲ್ಲಿ 38 ಮೈತ್ರಿ ಪಕ್ಷಗಳ ನಾಯಕರು ಭಾಗಿ: ಜೆಪಿ ನಡ್ಡಾ
ಜೆಪಿ ನಡ್ಡಾImage Credit source: File / PTI
Follow us
TV9 Web
| Updated By: Rakesh Nayak Manchi

Updated on:Jul 17, 2023 | 7:18 PM

ನವದೆಹಲಿ, ಜುಲೈ 17: ಲೋಕಸಭೆ ಚುನಾವಣೆಗೆ (Loka Sabha Elections) ಕೆಲವು ತಿಂಗಳು ಬಾಕಿ ಇರುವಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸೋಲಿಸಲು ಪಣತೊಟ್ಟಿರುವ ಕಾಂಗ್ರೆಸ್ ಸೇರಿದಂತೆ 24 ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ (Opposition Parties Meet) ನಡೆಸುತ್ತಿವೆ. ಪ್ರಬಲ ಪೈಪೋಟಿ ಸಾಧ್ಯತೆ ಹಿನ್ನೆಲೆ ಎಚ್ಚೆತ್ತಿರುವ ಬಿಜೆಪಿ, ನಾಳೆ ಎನ್​ಡಿಎ ಸಭೆ (NDA Meeting) ನಡೆಸಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದೆ. ಸಭೆಯಲ್ಲಿ 38 ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಪಿ ನಡ್ಡಾ, ನಾಳೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ 38 ಮೈತ್ರಿ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಮೇಲೆ ದೇಶದ ಜನ ನಂಬಿಕೆಯಿಟ್ಟಿದ್ದಾರೆ. ಮೋದಿ ನೇತೃತ್ವದಲ್ಲಿ ಒಂಬತ್ತು ವರ್ಷಗಳ ಆಡಳಿತ ಯಶಸ್ವಿಯಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಒಂಬತ್ತು ವರ್ಷಗಳಲ್ಲಿ ಮೋದಿಯವರ ಬಲಿಷ್ಠ ನಾಯಕತ್ವ ನೋಡಿದ್ದೇವೆ. ಕೊವಿಡ್‌ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ ಎಂದರು.

ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಎನ್​ಡಿಎ ಮೈತ್ರಿ ಪಕ್ಷಗಳು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಸೂಚಿ, ಯೋಜನೆಗಳು, ನೀತಿಗಳ ಬಗ್ಗೆ ಆಸಕ್ತಿ ತೋರಿಸಿವೆ. ಪಕ್ಷಗಳು ಎನ್​ಡಿಎ ಕಡೆಗೆ ಉತ್ಸಾಹದಿಂದ ಬರುತ್ತಿವೆ ಎಂದು ನಡ್ಡಾ ಹೇಳಿದರು.

ಇದನ್ನೂ ಓದಿ: ಎನ್​ಡಿಎ ಜತೆ ಮೈತ್ರಿ ಬಗ್ಗೆ ಮಾಹಿತಿ ಇಲ್ಲ, ವಿಪಕ್ಷಗಳ ಸಭೆಗೆ ಆಹ್ವಾನ ಏಕೆ ಇಲ್ಲ ಗೊತ್ತಿಲ್ಲ: ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಯನ್ನು ಟೀಕಿಸಿದ ಜೆಪಿ ನಡ್ಡಾ, ನಮ್ಮ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ಅದು ಸೇವೆಗಾಗಿ. ಆದರೆ ಯುಪಿಎ ಮೈತ್ರಿಗೆ ನಾಯಕನೂ ಇಲ್ಲ, ನೀತಿಯೂ ಇಲ್ಲ. ಇದು ಹಗರಣಕೋರರ ಒಂದು ಗುಂಪು. ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದರು.

ಇದೇ ವೇಳೆ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದ ನಡ್ಡಾ, ಒಂಬತ್ತು ವರ್ಷಗಳಲ್ಲಿ ಗ್ರಾಮಗಳು, ಬಡವರು, ಶೋಷಿತರು, ಸಂತ್ರಸ್ತರು, ವಂಚಿತರು, ದಲಿತರು, ಯುವಕರು, ಮಹಿಳೆಯರು, ರೈತರ ಕಡೆಗೆ ಯೋಜನೆಗಳನ್ನು ಕೇಂದ್ರೀಕರಿಸಲಾಗಿದೆ. ಅವರ ಸಬಲೀಕರಣದಲ್ಲಿ ನಮಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಪ್ರಬಲ ನಾಯಕತ್ವ ಸಿಕ್ಕಿದೆ. ಈ ನಾಯಕತ್ವಕ್ಕೆ ಜನರ ಮೆಚ್ಚುಗೆ ಪಡೆದಿದೆ ಮತ್ತು ಅತ್ಯಂತ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ ಎಂದರು.

ಉಪೇಂದ್ರ ಕುಶ್ವಾಹಾಗೆ ಆಹ್ವಾನ ನೀಡಿದ ಜೆಪಿ ನಡ್ಡಾ

ನಾಳೆ ನಡೆಯುವ ಎನ್‌ಡಿಎ ಮಹತ್ವದ ಸಭೆಗೆ ರಾಷ್ಟ್ರೀಯ ಲೋಕ ಜನತಾದಳದ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಅವರಿಗೆ ಆಹ್ವಾನ ನೀಡಲಾಗಿದೆ. ಸಭೆಯಲ್ಲಿ ಭಾಗಿಯಾಗುವಂತೆ ಉಪೇಂದ್ರ ಕುಶ್ವಾಹಾಗೆ ನಡ್ಡಾ ಅವರು ಆಹ್ವಾನ ನೀಡಿದ್ದಾರೆ. ಆದರೆ ಅವರ ಭಾಗವಹಿಸುವಿಕೆ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Mon, 17 July 23