ಎನ್ಡಿಎ ಜತೆ ಮೈತ್ರಿ ಬಗ್ಗೆ ಮಾಹಿತಿ ಇಲ್ಲ, ವಿಪಕ್ಷಗಳ ಸಭೆಗೆ ಆಹ್ವಾನ ಏಕೆ ಇಲ್ಲ ಗೊತ್ತಿಲ್ಲ: ಹೆಚ್ಡಿ ಕುಮಾರಸ್ವಾಮಿ
ಬಿಜೆಪಿ ಮತ್ತು ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೈಜೋಡಿಸಲಿವೆ ಎಂಬ ಮಾತು ಕೇಳಿಬರುತ್ತಿವೆ. ಆದರೆ ಎನ್ಡಿಎ ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ಯಾರೂ ಕರೆ ಕೂಡ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ ಮತ್ತು ಜೆಡಿಎಸ್ ಇದೀಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೈಜೋಡಿಸಲಿವೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿವೆ. ಆದರೆ ಎನ್ಡಿಎ (NDA) ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ಯಾರೂ ಕರೆ ಕೂಡ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿಯಾಗಿ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಯಾಕೆ ಆಹ್ವಾನ ಕೊಟ್ಟಿಲ್ಲ ಅಂತ ಗೊತ್ತಿಲ್ಲ ಎಂದೂ ಹೇಳಿದ್ದಾರೆ. ಇದೇ ವೇಳೆ, ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಕೇವಲ 2 ತಿಂಗಳಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚಿನ ಡೀಲ್ ಮಾಡಿದೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನ್ ಸಭೆಗೆ ಕಾಂಗ್ರೆಸ್ ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. 123 ಸ್ಥಾನ ಬರದಿದ್ದರೆ ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಮಹಾಘಟಬಂಧನ್ನಿಂದ ಜೆಡಿಎಸ್ನ್ನು ದೂರವಿಟ್ಟ ವಿಪಕ್ಷಗಳು: ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು
ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ, ಹಾಗಾಗಿ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಸಿದ್ದರಾಮಯ್ಯರನ್ನು ಕನ್ನಡ ಪಂಡಿತರು ಅಂತಾ ಅಂದುಕೊಂಡಿದ್ದೆ. ಆದರೆ ಅವರಿಗೆ ಕನ್ನಡ ಅರ್ಥ ಆಗಲ್ಲ ಅಂತಾ ಅನ್ನಿಸುತ್ತದೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಸರ್ಕಾರದಿಂದ ಎರಡನೇ ತಿಂಗಳಲ್ಲಿ 500 ಕೋಟಿ ರೂ. ಡೀಲ್
ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ವರ್ಗಾವಣೆಯಲ್ಲೇ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಕೇವಲ 2 ತಿಂಗಳಲ್ಲೇ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ವರ್ಗಾವಣೆ ದಂಧೆ ಬಗ್ಗೆ ಓರ್ವ ಅಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ. ಈ ಮಟ್ಟಕ್ಕೆ ವರ್ಗಾವಣೆ ದಂಧೆ ನಡೆದರೆ ಕರ್ನಾಟಕ ಉಳಿಯುತ್ತಾ ಎಂದು ಪ್ರಶ್ನಿಸಿದರು.
ನನ್ನ ಕಾಲದಲ್ಲಿ ವರ್ಗಾವಣೆಯಲ್ಲಿ ಕೋಟಿ ಕೋಟಿ ಹಣ ಪಡೆದಿದ್ದಾರೆ ಅಂತ ನನ್ನ ಮೇಲೆ ದಾಖಲೆ ಬಿಡುಗಡೆ ಮಾಡುತ್ತಿರಾ. ಒಂದು ವೇಳೆ ನನ್ನ ಕಾಲದಲ್ಲಿ ವರ್ಗಾವಣೆಗೆ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯುವುದು ಫಿಕ್ಸ್, BJP ಜತೆ ಮೈತ್ರಿ ಹಿಂದಿದೆ ಜೆಡಿಎಸ್ ಲೆಕ್ಕಾಚಾರ!
ಮಹಾಘಟಬಂಧನ್ನಿಂದ ದೇಶಕ್ಕೆ ಯಾವ ಸಂದೇಶ ಕೊಡುತ್ತಿರಾ?
ಹಾವೇರಿಯ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸರ್ಕಾರ ಮಾತನಾಡಲಿಲ್ಲ. ಈಗ 40 ಜನ ದೇಶದ ನಾಯಕರನ್ನ ಕರೆಸಿ ಮಹಾಘಟಬಂಧನ್ ಅಂತ ದೇಶಕ್ಕೆ ಯಾವ ಸಂದೇಶ ಕೊಡುತ್ತಿರಾ? ನಾನು ಪ್ರಮಾಣ ವಚರ ಸ್ವೀಕಾರ ಮಾಡುವಾಗ ಮಾಹಾಘಟಬಂಧನ್ ಅಂತ 24 ಜನ ಕೈ ಎತ್ತಿ ನಿಂತಿರಲ್ಲ. ಏನ್ಆಯ್ತು ಮಹಾಘಟಬಂಧನ್ ಎಂದು ಕಿಡಿಕಾರಿದರು.
ನಾನು ಕಾಂಗ್ರೆಸ್ ಪಕ್ಷದ ಗುಲಾಮನಲ್ಲ
ಜೆಡಿಎಸ್ನಿಂದ ಅವಕಾಶವಾದಿ ರಾಜಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು, ಇವರನ್ನ ಕೇಳಿ ನನ್ನ ಪಕ್ಷವನ್ನು ಮುನ್ನಡೆಸುವ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಗುಲಾಮನಲ್ಲ. ಕಾಂಗ್ರೆಸ್ನವರು ರಾಜ್ಯ ಗೆದ್ದಂತೆ ದೇಶ ಗೆಲ್ತೀವಿ ಅಂದುಕೊಂಡಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Mon, 17 July 23