ಮಹಾಘಟಬಂಧನ್ನಿಂದ ಜೆಡಿಎಸ್ನ್ನು ದೂರವಿಟ್ಟ ವಿಪಕ್ಷಗಳು: ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು
ಇಂದಿನಿಂದ ಎರಡು ದಿನಗಳ ಕಾಳ ಬೆಂಗಳೂರಿನಲ್ಲಿ ವಿಪಕ್ಷಗಳ ಜಂಟಿ ಸಭೆ ನಡೆಯಲಿದ್ದು, ಈ ಸಭೆಯಿಂದ ಜೆಡಿಎಸ್ ಪಕ್ಷವನ್ನು ದೂರ ಇಡಲಾಗಿದೆ. ಇದಕ್ಕೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು.
ಬೆಂಗಳೂರು, (ಜುಲೈ 17): ಮುಂಬರುವ ಲೋಕಸಭೆ ಚುನಾವಣೆಗೆ (Loksabha Election’s 2024) ಭರ್ಜರಿ ತಯಾರಿ ನಡೆದಿವೆ. ಈ ಬಾರಿ ನರೇಂದ್ರ ಮೋದಿಯನ್ನು(Narendra Modi) ಮಣಿಸಲು ವಿಪಕ್ಷಗಳು(Opposition Meeting) ಒಗ್ಗಟ್ಟಾಗಿದ್ದು, ಈ ಸಂಬಂಧ ತಂತ್ರಗಳನ್ನು ರೂಪಿಸಲು ಇಂದಿನಿಂದ ಎರಡು ದಿನಗಳ ಬೆಂಗಳೂರಿನಲ್ಲಿ(Bengaluru) ಮಹತ್ವದ ಸಭೆ ನಡೆಸಲಿವೆ. ಆದ್ರೆ, ಈ ಸಭೆಗೆ ಜೆಡಿಎಸ್ಗೆ ಆಹ್ವಾನ ಕೊಟ್ಟಿಲ್ಲ. ಇನ್ನು ಈ ಬಗ್ಗೆ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಪ್ರತಿಕ್ರಿಯಿಸಿದ್ದು, ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ. ಜೆಡಿಎಸ್ ಮುಳುಗಿಹೋಗಿದೆ ಎಂಬ ಭ್ರಮೆಯಲ್ಲಿ ಮಹಾಘಟಬಂಧನ್ ಇದೆ. ನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟರೂ ಕೊಡದಿದ್ದರೂ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು (ಜುಲೈ 17) ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಪಾಪ ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ. ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿ ಮಹಾಘಟಬಂದನ್ ವ್ಯವಸ್ಥಾಪಕರು ಇದ್ದಾರೆ. ಆಹ್ವಾನ ಕೊಟ್ಟರು,ಇಲ್ಲವೋ ಎನ್ನುವುದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ. ಇವರಿಗೆ ರೈತರ ಸಾವು ಕಾಣಿಸುತ್ತಿಲ್ಲ. ಇಂದಿನವರೆಗೂ ಆತ್ಮಹತ್ಯೆಗೆ ಒಳಗಾಗಬೇಡಿ ಎಂದು ಸಂದೇಶ ಸರ್ಕಾರ ನೀಡಿಲ್ಲ. ಇದು ಬೇಕಾಗಿಲ್ಲ ಎಂದು ಪರೋಕ್ಷವಾಗಿ ಮಹಾಘಟಬಂದನ್ ಸಭೆ ಬಗ್ಗೆ ಟೀಕಿಸಿದರು.
ಇನ್ನು ಇದೇ ವೇಳೆ ಎನ್‌ಡಿಎ ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ. ಮುಂದೆ ನೋಡೋಣ. ನನ್ನ ಪಕ್ಷ ಸಂಘಟನೆ ಏನಿದೆ, ನಾಡಿನ ಸಮಸ್ಯೆ ಏನಿದೆ ಅದನ್ನ ನೋಡುತ್ತಿದ್ದೇನೆ ಎಂದರು.
ಬಿಜೆಪಿ ಕಟ್ಟಿಹಾಕಲು ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗ್ತಿವೆ. ಇದರ ಮಧ್ಯೆ ಬಿಜೆಪಿ ಸಹ ತನ್ನ ಬಲ ಹೆಚ್ಚಿಸಿಕೊಳ್ಳಲು ಜುಲೈ 18ರಂದು ಸಭೆ ಕರೆದಿದೆ. ಎನ್‌ಡಿಎ ಮೈತ್ರಿಕೂಟವನ್ನ ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದೆ. ಈ ಪೈಕಿ ಜೆಡಿಎಸ್‌ಗೂ ಗಾಳ ಹಾಕಿದೆ. ಹೀಗಾಗಿ ವಿಪಕ್ಷಗಳ ಸಭೆಗೆ ಈ ಬಾರಿ ಜೆಡಿಎಸ್ಗೆ ಅಧಿಕೃತವಾಗಿ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿಲ್ಲ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ