ಬೆಂಗಳೂರಿನಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಮಹಾಸಂಗಮ, ಮೋದಿ ವಿರುದ್ಧದ ಯುದ್ಧಕ್ಕೆ ಕರ್ನಾಟಕದಿಂದ್ಲೇ ರಣಕಹಳೆ!
ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳೆಲ್ಲ ಒಂದಾಗಿದ್ದು, ಮೋದಿ ವಿರುದ್ಧದ ಯುದ್ಧಕ್ಕೆ ಕರ್ನಾಟಕದಿಂದ್ಲೇ ರಣಕಹಳೆ ಮೊಳಗಿಸಲು ಸಜ್ಜಾಗಿವೆ.
ಬೆಂಗಳೂರು: ಮುಂದೆ 2024ಕ್ಕೆ ಲೋಕಸಭೆ ಚುನಾವಣೆ ಬರುತ್ತಿದೆ. ಹೇಗಾದ್ರೂ ಮಾಡಿ ಮುಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಕಟ್ಟಿಹಾಕಲೇಬೇಕೆಂದು ದೇಶದ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ.ಇದಕ್ಕಾಗಿ ಇಂದು (ಜುಲೈ 17) ಬೆಂಗಳೂರಿನಲ್ಲಿ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ. ಈ ಮೊದಲು ಬಿಹಾರದಲ್ಲಿ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆ ನಡೆದಿತ್ತು. 15ಪಕ್ಷಗಳ 32ನಾಯಕರು ಪಾಲ್ಗೊಂಡಿದ್ದರು. ಆದ್ರೆ ಕೇಜ್ರಿವಾಲ್ ಸೇರಿ ಹಲವು ನಾಯಕರು ಆ ಸಭೆಗೆ ಕೈಕೊಟ್ಟಿದ್ದರು. ಇನ್ನು ಸಂಚಾಲಕರ ನೇಮಕ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಹಿಮಾಚಲಪ್ರದೇಶದಲ್ಲಿ ಸಭೆ ಆಯೋಜಿಸಲು ನಿರ್ಧರಿಸಿ ಆ ನಂತರ ಕೈಬಿಡಲಾಗಿತ್ತು. ಇದೀಗ 2ನೇ ಬಾರಿಗೆ ಇಂದು ಮತ್ತು ನಾಳೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.. ಈ ಬಾರಿ ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಇಂದಿನ ಸಭೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗರಾದಾದ್ಯಂತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ಹಳೆದೋಸ್ತಿಗಳನ್ನು ಒಗ್ಗೂಡಿಸಲು ಬಿಜೆಪಿ ಸರ್ಕಸ್! ಲೋಕಸಭೆಗೆ ಒಂದಾಗೋಣ ಬನ್ನಿ ಎನ್ನುತ್ತಿದೆ ಬಿಜೆಪಿ!
ವಿಪಕ್ಷಗಳ ಒಕ್ಕೂಟದ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ನ ಹಾಲಿ ಸಿಎಂ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಹ ಆಗಮಿಸಲಿದ್ದಾರೆ. ಅಷ್ಟೇ ಅಲ್ಲದೇ ಎನ್ಸಿಪಿಯ ಶರದ್ ಪವಾರ್, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂ ಶಿವಸೇನೆಯ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ, CPI ನಾಯಕ ಡಿ.ರಾಜಾ. ಸಿಪಿಐಎಂ ನಾಯಕ ಸೀತಾರಾಂ ಯಚೂರಿ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ಇವ್ರಲ್ಲಿ ಆರು ಜನ ಹಾಲಿ ಸಿಎಂಗಳಾಗಿದ್ರೆ. ಆರು ಜನ ಮಾಜಿ ಸಿಎಂಗಳು ಇರುವುದು ವಿಶೇಷವಾಗಿದೆ.
ಈಗಾಗಲೇ ಕೆಲ ವಿಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ(ಜುಲೈ 16) ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಿಪಿಐನ ಸೀತಾರಾಂ ಯೆಚೂರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇನ್ನು ಇಂದು ಸಂಜೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜತೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಜೆಡಿಎಸ್ಗಿಲ್ಲ ಆಹ್ವಾನ, ಕೊನೇ ಕ್ಷಣದಲ್ಲಿ ಸಭೆಗೆ ಬರಲು ಒಪ್ಪಿದ ಆಪ್
ಇಂದಿನ ವಿಪಕ್ಷಗಳ ಸಭೆಗೆ ಈ ಬಾರಿ ಜೆಡಿಎಸ್ಗೆ ಅಧಿಕೃತವಾಗಿ ಆಹ್ವಾನ ನೀಡಿಲ್ಲ. ಇನ್ನು ಕೊನೆ ಕ್ಷಣದಲ್ಲಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ವಿಪಕ್ಷಗಳ ಸಭೆಗೆ ಬರಲು ಒಪ್ಪಿಕೊಂಡಿದ್ದಾರೆ. ಸಂಚಾಲಕರ ನೇಮಕ, 400 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇನ್ನು ವಿಪಕ್ಷಗಳ ನಾಯಕರಿಗೆ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಔತಣ ಕೂಟ ಏರ್ಪಡಿಸಿದ್ದಾರೆ.
ಇಂದಿನ ಮಹಾಮೈತ್ರಿಕೂಟದ ಸಭೆಯಲ್ಲಿ 24 ಪಕ್ಷಗಳ 49 ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೋದಿ ವಿರುದ್ಧ ಅದ್ಯಾವ ರೀತಿ ತಂತ್ರಗಾರಿಕೆ ಹೆಣೆಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಹಲವೆಡೆ ರಸ್ತೆ ಮಾರ್ಗ ಬದಲಾವಣೆ
ವಿಧಾನಸಭೆ ಅಧಿವೇಶನ ಅಲ್ಲದೇ ವಿಪಕ್ಷಗಳ ಸಭೆ ಹಿನ್ನೆಲೆ ಬೆಂಗಳೂರಿನ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬಿ.ಆರ್.ಅಂಬೇಡ್ಕರ್ ರಸ್ತೆ, ಕಬ್ಬನ್ ರಸ್ತೆ, ಪ್ಯಾಲೆಸ್ ರಸ್ತೆ. ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ ಬಳಸದಂತೆ ಸೂಚನೆ ನೀಡಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರ ಮನವಿ ಮಾಡಿದ್ದಾರೆ. ಹಾಗೇ ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ರಾಜಭವನ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆಯಲ್ಲೂ ಪಾರ್ಕಿಂಗ್ ನಿಷೇಧಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ