ಪಂಜಾಬ್: ಮಾಟಮಂತ್ರಕ್ಕಾಗಿ 9ರ ಹರೆಯದ ಬಾಲಕಿಯ ಹೃದಯ ಬಗೆದು ಕೊಂದ ಮಹಿಳೆ
ಜುಲೈ 11, ಮಂಗಳವಾರದಂದು ಸುಖಮನ್ದೀಪ್ ಕೌರ್ ನಾಪತ್ತೆಯಾದ ನಂತರ ಆಕೆಯ ಕುಟುಂಬವು ರಾತ್ರಿ ದೂರು ದಾಖಲಿಸಿದೆ. ಹುಡುಕಾಟದ ಸಮಯದಲ್ಲಿ, ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಆದರೆ ಹುಡುಗಿ ಪತ್ತೆಯಾಗಲಿಲ್ಲ.
ಅಮೃತಸರ: ಪಂಜಾಬ್‌ನ (Punjab) ಅಮೃತಸರದಲ್ಲಿ (Amritsar) ಬ್ರೈನ್‌ವಾಶ್ ಮಾಡಲ್ಪಟ್ಟ ಮಹಿಳೆಯೊಬ್ಬಳು, ತನ್ನ ನೆರೆಮನೆಯ ಒಂಬತ್ತು ವರ್ಷದ ಬಾಲಕಿಯೊಬ್ಬಳ ಹೃದಯವನ್ನು ಬಗೆದು ತೆಗೆದ ಪ್ರಕರಣವೊಂದು ನಡೆದಿದೆ. ಹೀಗೆ ಮಾಡಿದರೆ ತನಗೆ ಆರ್ಥಿಕ ಲಾಭವುಂಟಾಗುತ್ತದೆ ಎಂಬ ಮೂಢನಂಬಿಕೆಯಿಂದ (black magic practice) ಮಹಿಳೆ ಬಾಲಕಿಯ ಹೃದಯಕ್ಕೆ ಇರಿದಿದ್ದಾಳೆ. ಇರಿತಕ್ಕೊಳಗಾದ ಬಾಲಕಿ ತಕ್ಷಣವೇ ಸಾವಿಗೀಡಾಗಿದ್ದಾಳೆ. ಅಮೃತಸರ ಜಿಲ್ಲೆಯ ವರ್ಕಾ ಪಟ್ಟಣದ ಮುಧಲ್ ಗ್ರಾಮದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆ ಜಸ್ಬೀರ್ ಕೌರ್, ಆಕೆಯ ಪತಿ ದಲ್ಬೀರ್ ಸಿಂಗ್, ಮಗ ಮತ್ತು ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟಿವಿ9 ಪಂಜಾಬಿ ವರದಿ ಮಾಡಿದೆ. ತನಿಖೆಯಲ್ಲಿ ಇನ್ನಷ್ಟು ಭಯಾನಕ ವಿವರಗಳು ಬಹಿರಂಗವಾಗಿದ್ದು, ಇದು ಜನರನ್ನು ಬೆಚ್ಚಿ ಬೀಳಿಸಿದೆ.
ಜುಲೈ 11, ಮಂಗಳವಾರದಂದು ಸುಖಮನ್ದೀಪ್ ಕೌರ್ ನಾಪತ್ತೆಯಾದ ನಂತರ ಆಕೆಯ ಕುಟುಂಬವು ರಾತ್ರಿ ದೂರು ದಾಖಲಿಸಿದೆ. ಹುಡುಕಾಟದ ಸಮಯದಲ್ಲಿ, ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಆದರೆ ಹುಡುಗಿ ಪತ್ತೆಯಾಗಲಿಲ್ಲ. ನಂತರ ಸ್ನಿಫರ್ ಡಾಗ್‌ಗಳನ್ನು ಕರೆತರಲಾಯಿತು. ಈ ನಾಯಿಗಳು ಪೊಲೀಸರನ್ನು ಬಾಲಕಿಯ ಮನೆಯ ಸಮೀಪವಿರುವ ಜಸ್ಬೀರ್ ನಿವಾಸಕ್ಕೆ ಕರೆದೊಯ್ಯಿತು ಎಂದು ಎಸಿಪಿ ಸುಖಪಾಲ್ ಸಿಂಗ್ ಸೋಮವಾರ ತಿಳಿಸಿದ್ದಾರೆ. ಸುಳಿವು ಆಧರಿಸಿ ಅಕ್ಕಪಕ್ಕದ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಪೂರ್ವಯೋಜಿತ ಕೊಲೆ
ಜಬೀರ್ ತನ್ನ ವಿಚಾರಣೆಯ ವೇಳೆ ಪೊಲೀಸರಿಗೆ ತಾನು ಮಾಟಮಂತ್ರ ಮಾಡುವವನಿಂದ ಹಲವು ವರ್ಷಗಳಿಂದ ಮಾಟಮಂತ್ರವನ್ನು ಕಲಿತಿದ್ದೇನೆ. ತನ್ನ ಕುಟುಂಬದ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ಹುಡುಗಿಯನ್ನು ಕೊಲ್ಲಲು ಆತ ಹೇಳಿದ್ದ ಎಂದಿದ್ದಾಳೆ. ಜುಲೈ 11ರಂದು ಸಂಜೆ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಬಂದ ಆಕೆ ಚಾಕುವಿನಿಂದ ಬಾಲಕಿಯ ಹೃದಯಕ್ಕೆ ಇರಿದಿದ್ದು,ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಎಸಿಪಿ ತಿಳಿಸಿದ್ದಾರೆ.
ಬಳಿಕ ಮಹಿಳೆ ಶವವನ್ನು ಗೋಣಿಚೀಲದಲ್ಲಿ ತುಂಬಿ ರಾತ್ರಿ ವೇಳೆ ಸಮೀಪದ ಹವೇಲಿಯಲ್ಲಿ ಎಸೆದಿದ್ದಾಳೆ. ಸಂತ್ರಸ್ತೆಯ ಕುಟುಂಬಕ್ಕೆ ಅನುಮಾನ ಬರದಂತೆ ಬಾಲಕಿಯನ್ನು ಹುಡುಕಲು ಆಕೆಯೂ ಸೇರಿಕೊಂಡಳು.
ಮಾಟಗಾರನಿಗಾಗಿ ಹುಡುಕಾಟ
ಮಹಿಳೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಭೀಕರ ಕೃತ್ಯ ಎಸಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದುವರೆಗೆ ಆತನ ಗುರುತು ಅಥವಾ ಆತ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: PES ಕಾಲೇಜಿನ 8ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ
ಜಸ್ಬೀರ್ ಕುಟುಂಬ ಬಂಧನ
ಜಸ್ಬೀರ್ ಸೇರಿದಂತೆ ನಾಲ್ವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ