ಸ್ನೇಹವೋ.. ಅಧಿಕಾರವೋ.. ಆಪ್ತ ಸ್ನೇಹಿತ‌ನ ರೀ ಎಂಟ್ರೀ, ಇಕ್ಕಟ್ಟಿಗೆ ಸಿಲುಕಿದ ಸಚಿವ ಶ್ರೀರಾಮುಲು…!

| Updated By: ರಮೇಶ್ ಬಿ. ಜವಳಗೇರಾ

Updated on: Dec 27, 2022 | 8:40 PM

ಕುಚುಕು ಗೆಳೆಯರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಈಗ ನೀನೊಂದು ಪಕ್ಷ ನಾನೊಂದು ಪಕ್ಷ ಎಂದು ಪರಸ್ಪರ ಎದುರಾಳಿಗಳಾಗಿ ರಾಜಕೀಯ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೆ, ಬೆಂಬಲಿಗರು ಗೊಂದಲಕ್ಕೀಡಾಗಿದ್ದಾರೆ.

ಸ್ನೇಹವೋ.. ಅಧಿಕಾರವೋ.. ಆಪ್ತ ಸ್ನೇಹಿತ‌ನ ರೀ ಎಂಟ್ರೀ, ಇಕ್ಕಟ್ಟಿಗೆ ಸಿಲುಕಿದ ಸಚಿವ ಶ್ರೀರಾಮುಲು...!
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ
Follow us on

ಬಳ್ಳಾರಿ: ಸಾರಿಗೆ ಸಚಿವ ಬಿ ಶ್ರೀರಾಮುಲು ಮತ್ತು ಮಾಜಿ ಸಚಿವ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸ್ಪಾಪಕ ಜನಾರ್ದನ ರೆಡ್ಡಿ ಮೂರು ದಶಕಗಳಿಂದ ಆಪ್ತ ಸ್ನೇಹಿತರು. ಆದ್ರೆ, ಇದೀಗ ಒಂದೇ ಆತ್ಮ ಎರಡು ಜೀವ ಎನ್ನುವಂತಿದ್ದ ಗೆಳೆಯರು ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಹ‌ ಪರಿಸ್ಥಿತಿ ಎದುರಾಗಿದೆ. ಜೊತೆ ಜೊತೆಗೆ ರಾಜಕೀಯ ಆರಂಭಿಸಿದ ಆಪ್ತ ಸ್ನೇಹಿತರು ಇದೀಗ ವಿಭಿನ್ನ ಪಕ್ಷಗಳಲ್ಲಿರುವುದು ವಿಪಕ್ಷಗಳ ಲೇವಡಿಗೆ ಕಾರಣವಾಗಿದೆ. ಸಚಿವ ಶ್ರೀರಾಮುಲುಗೆ ಸ್ನೇಹ ಮುಖ್ಯವೋ ಅಥವಾ ಅಧಿಕಾರ ಮುಖ್ಯವೋ ಅನ್ನೋ ಪ್ರಶ್ನೆ ಪ್ರತಿಪಕ್ಷಗಳಿಂದ ತೂರಿಬಂದಿದೆ.

ಇದನ್ನೂ ಓದಿ: ಪಕ್ಷ ಏನೇ ಹೇಳಿದ್ರು ಮಾಡುವೆ; ಪರೋಕ್ಷವಾಗಿ ಗೆಳೆಯ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಿದ್ಧ ಎಂದ ರಾಮುಲು

ನಗರಸಭೆ ಚುನಾವಣೆಯಿಂದ ಹಿಡಿದು ಶ್ರೀರಾಮುಲು ಸಚಿವರಾಗುವ ತನಕ ಜೊತೆಗೆ ಇದ್ದಿದ್ದು ಆಪ್ತ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಮಾತ್ರ. ರೆಡ್ಡಿ ರಾಜಕೀಯ ಹಾಗೂ ಉದ್ಯಮಕ್ಕೆ ಬೆಂಬಲವಾಗಿ ನಿಂತಿದ್ದು ಸಚಿವ ಶ್ರೀರಾಮುಲು ಮಾತ್ರ. ಅಕ್ಕ ಪಕ್ಕದಲ್ಲೇ ಮನೆ ಮಾಡಿಕೊಂಡು ಆತ್ಯಾಪ್ತ ಸ್ನೇಹಿತರಾಗಿದ್ದ ಶ್ರೀರಾಮುಲು ಜನಾರ್ದನ ರೆಡ್ಡಿ ಸ್ನೇಹಕ್ಕಾಗಿ ಕುಟುಂಬ ಸದಸ್ಯರು, ಪಕ್ಷದ ಹಿರಿಯರು ಹೈಕಮಾಂಡ್ ನಾಯಕರನ್ನ ಎದುರು ಹಾಕಿಕೊಂಡು ರಾಜಕೀಯ ಮಾಡಿದ್ದು ಇದೀಗ ಇತಿಹಾಸ. ಆದ್ರೆ ಈಗ ಇಬ್ಬರು ನಾನೊಂದು ಪಕ್ಷ. ನೀನೊಂದು ಪಕ್ಷ ಎಂದು ಪರಸ್ಪರ ಎದುರಾಳಿಗಳಾಗಿ ರಾಜಕೀಯ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದ ವೇಳೆ ಬಿಜೆಪಿ ಪಕ್ಷದ ನಾಯಕರು ರೆಡ್ಡಿ ಬೆಂಬಲಕ್ಕೆ ಬರಲಿಲ್ಲ ಎಂದು ಬಿಜೆಪಿ ಪಕ್ಷ ತೊರೆದು ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದ ಶ್ರೀರಾಮುಲು ಇದೀಗ ಬಿಜೆಪಿ ಪಕ್ಷವೇ ನನ್ನ ತಾಯಿ ಅಂತಿದ್ದಾರೆ. ಪಕ್ಷ ಸೂಚಿಸಿದ್ರೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸೈ ಎನ್ನುವಂತಹ ಸವಾಲು ಎದುರಿಸಲು ಶ್ರೀರಾಮುಲು ಸಿದ್ದರಾಗಿದ್ದಾರೆ.

ಇದನ್ನೂ ಓದಿ: ಕುಚುಕು ಗೆಳೆಯ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮೊದಲ ಪ್ರತಿಕ್ರಿಯೆಯಲ್ಲೇ ಅಚ್ಚರಿ ಮಾತುಗಳಾನ್ನಾಡಿದ ಶ್ರೀರಾಮುಲು!

ಸಚಿವ ಶ್ರೀರಾಮುಲುರನ್ನ ರಾಜಕೀಯ ಉನ್ನತ ಸ್ಥಾನಕ್ಕೆ ಎರಿಸುವಲ್ಲಿ ಜನಾರ್ದನ ರೆಡ್ಡಿ ಪಾತ್ರ ಬಹು ದೊಡ್ಡದು. ಆದ್ರೆ ಇದೀಗ ಅಪ್ತ ಸ್ನೇಹಿತ ಶ್ರೀರಾಮುಲು ಇಲ್ಲದೇ ಏಕಾಂಗಿಯಾಗಿ ಜನಾರ್ದನ ರೆಡ್ಡಿ ಪಕ್ಷ ಸ್ಪಾಪನೆ ಮಾಡಿ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದಾರೆ.

ಆಪ್ತ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಪಾಪನೆ ಮಾಡಿರುವದನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಸಚಿವ ಶ್ರೀರಾಮುಲುಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ರಾಮುಲು ಕಾಲು ಎಳೆಯಲು ಸಜ್ಜಾಗಿದ್ದಾರೆ.

(ಗೆಳೆಯನ ಅಸಮಾಧಾನವನ್ನು ಹೈಕಮಾಂಡ್ ಜೊತೆ ಮಾತಾಡಿ ನ್ಯಾಯ ಒದಗಿಸುತ್ತೇನೆ ಎಂದಿದ್ದ ತಾವು ವಿಫಲರಾದಿರಾ ಅಥವಾ ಅಧಿಕಾರದ ರುಚಿ ಕಂಡಮೇಲೆ ರಾಜಕೀಯ ಜೀವನ ರೂಪಿಸಿಕೊಟ್ಟ ಗೆಳೆಯನನ್ನೇ ಮರೆತಿರಾ @sriramulubjp ಅವರೇ? ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಶ್ರೀರಾಮುಲು ಹೋಗುವುದು ಯಾವಾಗ? ಸ್ನೇಹ ಮುಖ್ಯವೋ ಅಧಿಕಾರ ಮುಖ್ಯವೋ? ಎಂದು ಕಾಂಗ್ರೆಸ್ ಸಚಿವ ಶ್ರೀರಾಮುಲುಗೆ ಟ್ವೀಟ್ ಮಾಡಿ ಸವಾಲು ಎಸೆದಿದೆ. ಇದು ರಾಮುಲುಗೆ ಇರಿಸು ಮುರಿಸು ತಂದಿದೆ.

ಸಚಿವ ಶ್ರೀರಾಮುಲುಗೆ ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದಕ್ಕೆ ಸಚಿವ ಶ್ರೀರಾಮುಲು ಸಹ ತಿರುಗೇಟು ನೀಡಿದ್ದು. ಕಾಂಗ್ರೆಸ್ ಪಕ್ಷ ಸ್ನೇಹಿತರ ಮಧ್ಯೆ ಬೆಂಕಿ ಹಚ್ಚುವ ಕೆಲಸ‌ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷ ಆದೇಶ ಮಾಡಿದ್ರೆ ತಾವೂ ಗಂಗಾವತಿಯಲ್ಲಿ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸೈ ಅನ್ನುವ ಮೂಲಕ ಸ್ನೇಹವೇ ಬೇರೆ. ರಾಜಕಾರಣವೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೆಡ್ಡಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕಾಂಗ್ರೆಸ್-ಬಿಜೆಪಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಲಾಭ, ನಷ್ಟದ ಲೆಕ್ಕಾಚಾರ

ಇಕ್ಕಟ್ಟಿನಲ್ಲಿ ಸಿಲುಕಿದ ಬೆಂಬಲಿಗರು..!

ಸಚಿವ ಶ್ರೀರಾಮುಲು. ಜನಾರ್ದನ ರೆಡ್ಡಿ ಇಬ್ಬರು ಆಪ್ತ ಸ್ನೇಹಿತರು. ‌ಆದ್ರೆ ಇದೀಗ ಇಬ್ಬರು ನಾನೊಂದು ತೀರ ನೀನೊಂದು ತೀರ ಎನ್ನುವ ಹಾಗೆ ಪ್ರತ್ಯೇಕ ಪಕ್ಷಗಳಲ್ಲಿ ಪೈಪೋಟಿಗೆ ಇಳಿದಿರುವುದರಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ‌ಗದಗ, ರಾಯಚೂರು ಜಿಲ್ಲೆಯಲ್ಲಿನ ಬೆಂಬಲಿಗರು ಯಾರ ಜೊತೆಗೆ ಕೈ ಜೋಡಿಸಬೇಕು ಎನ್ನುವ ಗೊಂದಲಕ್ಕೆ ಸಿಲುಕಿದ್ದು‌ ಮಾತ್ರ ಸುಳ್ಳಲ್ಲ.

ಜನಾರ್ದನ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು ಬೇರೆ ಬೇರೆ ಪಕ್ಷಗಳಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿರುವುದು ಬೆಂಬಲಿಗರು ಹಾಗೂ ಕಾರ್ಯಕರ್ತರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದು. ಕಾರ್ಯಕರ್ತರು ಯಾರ ಜೊತೆ ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ಸಿಲುಕಿದ್ದು, ಮುಂದಿನ‌ ದಿನಗಳಲ್ಲಿ ತಮ್ಮ ನೆಚ್ಚಿನ ನಾಯಕರಿಗಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ರು ಆಶ್ಚರ್ಯ ಪಡಬೇಕಾಗಿಲ್ಲ.

ಇದನ್ನೂ ಓದಿ: ಹೊಸ ಪಕ್ಷ ಸ್ಥಾಪನೆ ಜತೆಗೆ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನೂ ಘೋಷಿಸಿದ ಜನಾರ್ದನ ರೆಡ್ಡಿ

ರೆಡ್ಡಿ ವರ್ಸಸ್ ರಾಮುಲು ಆಗಿರುವುದರಿಂದ ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಇಬ್ಬರು ನಾಯಕರ ಮಧ್ಯೆ ಪೈಪೋಟಿ ನಡೆಯಲಿದ್ದು, ಯಾರಿಗೆ ವಿಜಯ ಲಕ್ಷ್ಮಿ ಒಲಿಯಲಿದ್ದಾಳೆ ಎನ್ನುವದನ್ನು ಮತದಾರರು ನಿರ್ಧರಿಸಿದ್ದಾರೆ.

ವರದಿ: ವೀರೇಶ ದಾನಿ ಟಿವಿ 9 ಬಳ್ಳಾರಿ

Published On - 8:24 pm, Tue, 27 December 22