ಪಕ್ಷ ಏನೇ ಹೇಳಿದ್ರು ಮಾಡುವೆ; ಪರೋಕ್ಷವಾಗಿ ಗೆಳೆಯ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಿದ್ಧ ಎಂದ ರಾಮುಲು

ಸ್ನೇಹನಾ, ಅಧಿಕಾರನಾ? ಎಂಬ ಕಾಂಗ್ರೆಸ್ ಪ್ರಶ್ನೆಗೆ ಸಚಿವ ಶ್ರೀರಾಮುಲಕ ಖಡಕ್ ಉತ್ತರ ನೀಡಿದ್ದಾರೆ. ತನಗೆ ಪಕ್ಷವೇ ಮುಖ್ಯ ಎನ್ನುವ ಧಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.

ಪಕ್ಷ ಏನೇ ಹೇಳಿದ್ರು ಮಾಡುವೆ; ಪರೋಕ್ಷವಾಗಿ ಗೆಳೆಯ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಿದ್ಧ ಎಂದ ರಾಮುಲು
ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ
Follow us
TV9 Web
| Updated By: Rakesh Nayak Manchi

Updated on:Dec 27, 2022 | 2:11 PM

ಬೆಳಗಾವಿ: ಸ್ನೇಹನ, ಅಧಿಕಾರನಾ ಎಂಬ ಕಾಂಗ್ರೆಸ್ (Congress) ಪಕ್ಷಕ್ಕೆ ಸಾರಿಗೆ ಖಾತೆ ಸಚಿವ ಶ್ರೀರಾಮುಲು (Sriramulu) ಪಕ್ಷವೇ ಮುಖ್ಯ ಎಂದು ಹೇಳಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ (Gali Janardhana Reddy) ಹೊಸ ಪಕ್ಷ ಸ್ಥಾಪನೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮುಲು, ನಮ್ಮದು ರಾಷ್ಟ್ರೀಯ ಪಕ್ಷ, ಬಿಜೆಪಿ (BJP) ನನಗೆ ತಾಯಿ ಇದ್ದಂತೆ. ಪಕ್ಷ ನನಗೆ ಇಷ್ಟೊಂದು ಸ್ಥಾನಮಾನ ನೀಡಿದೆ. ಸ್ನೇಹ ಹಾಗೂ ರಾಜಕಾರಣ ಒಂದೇ ತಟ್ಟೆಯಲ್ಲಿ ತೂಗಬೇಡಿ ಎಂದರು. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮುಲು, ನಮ್ಮ ಪಕ್ಷ ಏನೇ ಕೆಲಸ ಹೇಳಿದರೂ ಅದನ್ನು ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಸ್ನೇಹ ಮುಖ್ಯವೋ, ಅಧಿಕಾರ ಮುಖ್ಯವೋ ಎಂಬ ಕಾಂಗ್ರೆಸ್​​ನ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಕಾಂಗ್ರೆಸ್​​ನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತಗಳೇ ಬೇರೆ ಹಾಗೂ ಸ್ನೇಹವೇ ಬೇರೆ. ನಾನು ಯಾಕೆ ರೆಡ್ಡಿಯವರ ಜೊತೆ ಹೋಗಲಿ ಎಂದು ಪ್ರಶ್ನಿಸಿದರು. ಅಲ್ಲದೆ ನನಗೆ ಪಕ್ಷ ಮುಖ್ಯ, ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಜನಾರ್ದನ ರೆಡ್ಡಿ ಅವರಿಗೆ ಒಳ್ಳೆದಾಗಲಿ ಎಂದು ಹಾರೈಸುತ್ತೇನೆ ಎಂದರು. 2023ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ನಮ್ಮ ಟಾಸ್ಕ್ ಮತ್ತು ಗುರಿಯಾಗಿದೆ. ನಮ್ಮ ಉದ್ದೇಶ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಬೇಕು ಎಂಬುದಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದರು.

ಇದನ್ನೂ ಓದಿ: ಪ್ರತ್ಯೇಕ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ ಮನವೊಲಿಕೆಗೆ ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ: ಕಾಂಗ್ರೆಸ್ ವಲಯದಲ್ಲಿ ಚಿಂತನ-ಮಂಥನ

ಬಳ್ಳಾರಿಯಲ್ಲಿ ರೆಡ್ಡಿ ಪರ ಪ್ರಚಾರ ಆರಂಭ; ಅಲ್ಲಲ್ಲಿ ಬ್ಯಾನರ್​ಗಳ ಅಳವಡಿಕೆ

ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyan Rajya pragathi paksha) ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರ ನಗರದಲ್ಲಿ ಪ್ರಚಾರ ಆರಂಭಗೊಂಡಿದೆ. ಹಲವು ಕಡೆಗಳಲ್ಲಿ ಜನಾರ್ದನ ರೆಡ್ಡಿ ಹೊಸ‌ ಪಕ್ಷದ‌ ಬ್ಯಾನರ್​ಗಳು ರಾರಾಜಿಸಲು ಆರಂಭವಾಗಿದೆ. ಹೊಸ ಪಕ್ಷ ಕಟ್ಟಿರುವ ಜನಾರ್ದನ ರೆಡ್ಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಅಭಿಮಾನಿಗಳು ಬ್ಯಾನರ್​ಗಳನ್ನು ಹಾಕುತ್ತಿದ್ದಾರೆ. ಪ್ರಮುಖ ನಾಯಕರ ಪೋಟೋ ಇಲ್ಲದೇ ಕೇವಲ ಸಣ್ಣಪುಟ್ಟ ಕಾರ್ಯಕರ್ತರ ಫೋಟೋ ಇರುವ ಬ್ಯಾನರ್ ಹಾಕಲಾಗಿದೆ. ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಹೊರತುಪಡಿಸಿ ಯಾವೊಬ್ಬ ಪ್ರಮುಖ ನಾಯಕರ ಪೋಟೋ ಬ್ಯಾನರ್​ನಲ್ಲಿ ಇಲ್ಲ. ಭಾನುವಾರವೇ ಪಕ್ಷ ಘೋಷಣೆಯಾದರೂ ಇಂದು ಅಭಿಮಾನಿಗಳು ಬ್ಯಾನರ್ ಹಾಕಿದ್ದಾರೆ.

Gali Janardhana Reddy

ಬಳ್ಳಾರಿ ನಗರದಲ್ಲಿ ಗಾಲಿ ಜನಾರ್ದನ ರೆಡ್ಡಿ ಪರ ಬ್ಯಾನರ್​

ಇದನ್ನೂ ಓದಿ: ರೆಡ್ಡಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕಾಂಗ್ರೆಸ್-ಬಿಜೆಪಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಲಾಭ, ನಷ್ಟದ ಲೆಕ್ಕಾಚಾರ

ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬೆನ್ನಲ್ಲೆ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭ

ಬಳ್ಳಾರಿ: ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಪಾಪನೆಯಿಂದ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ರೆಡ್ಡಿ ಆಪ್ತರೂ ಆಗಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ದಮ್ಮೂರು‌ ಶೇಖರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಬಳ್ಳಾರಿ ಬುಡಾ ಅಧ್ಯಕ್ಷ, ಬಿಜೆಪಿ ಯುವ ಮೋರ್ಚ್ ರಾಜ್ಯ ಉಪಾಧ್ಯಕ್ಷ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಶೇಖರ್, ಮೊದಲಿನಿಂದಲೂ ರೆಡ್ಡಿ ಆಪ್ತವಲಯದಲ್ಲಿ ಗುರುತಿಕೊಂಡಿದ್ದರು. ಇದೀಗ ರಾಜೀನಾಮೆ ನೀಡಿದ್ದು, ಬಿಜೆಪಿ ಪಕ್ಷ ರೆಡ್ಡಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಪತ್ರದಲ್ಲಿ‌ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾಧ್ಯಕ್ಷರಿಂದ ರಾಜೀನಾಮೆ ಪತ್ರ‌ ಅಂಗೀಕಾರವೂ ಆಗಿದೆ.

ಗಾಲಿ ಜನಾರ್ದನ ರೆಡ್ಡಿ ಅವರು ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ತಮ್ಮ ಸಾಮ್ರಾಜ್ಯ ಕಟ್ಟಲು ಹೋರಾಡುತ್ತಿದ್ದಾರೆ. ಸದ್ಯ ಚುನಾವಣೆ ಹಿನ್ನಲೆ ಗಂಗಾವತಿಯಲ್ಲಿ ಪ್ರಚಾರಕ್ಕೂ ಇಳಿದಿದ್ದಾರೆ. ಅಲ್ಲದೆ, ಇದೇ ಕ್ಷೇತ್ರದಲ್ಲಿ ಹೊಸ ಮನೆಯ ಗೃಹ ಪ್ರವೇಶ ಮಾಡಿಸಿ ಗಂಗಾವತಿಯಲ್ಲಿ ಟೆಂಪಲ್ ರನ್ ಕೈಗೊಂಡಿದ್ದಾರೆ. ಡಿ.22ರಂದು ದೇವಸ್ಥಾನದ ಜೊತೆಗೆ ದರ್ಗಾಕ್ಕೂ ಭೇಟಿ ನೀಡುವ ಮೂಲಕ ಜನಾರ್ದನ ರೆಡ್ಡಿ ಬಿಜೆಪಿಯ ಜೊತೆ ಗಂಗಾವತಿಯ ಕಾಂಗ್ರೆಸ್ ಪಾಳೆಯದಲ್ಲೂ ನಡುಕ ಹುಟ್ಟಿಸಿದ್ದಾರೆ. ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಿದ್ದಾರೆ. ಈ ಮೂಲಕ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವೋಟ್ ಬ್ಯಾಂಕ್​ಗೆ ಕೈ ಹಾಕಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Tue, 27 December 22