ರೆಡ್ಡಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕಾಂಗ್ರೆಸ್-ಬಿಜೆಪಿ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಲಾಭ, ನಷ್ಟದ ಲೆಕ್ಕಾಚಾರ
ಜನಾರ್ದನ ರೆಡ್ಡಿ ಅವರ ಹೊಸ ಪಕ್ಷದಿಂದ ರಾಜ್ಯ ರಾಜಕಾರಣದಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಹಾಗಾದ್ರೆ, ರೆಡ್ಡಿ ಪಕ್ಷ ಯಾರಿಗೆ ಹೊಡೆತ ಕೊಡಲಿದೆ? ಯಾರಿಗೆ ವರದಾನವಾಗಲಿದೆ ಎನ್ನುವ ಒಂದು ಸಣ್ಣ ವಿಶ್ಲೇಷಣೆ ಈ ಕೆಳಗಿನಂತಿದೆ.
ಬೆಂಗಳೂರು: ಬಳ್ಳಾರಿ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿದ್ದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ (janardhana reddy), ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿಯಲ್ಲೇ ಇರ್ತೀನಿ ಎನ್ನುತ್ತಲೇ ಹೊಸ ಕಲ್ಯಾಣ ರಾಜ್ಯ ಪ್ರಗತಿ ((kalyana rajya pragati party)) ಎನ್ನುವ ಪಕ್ಷ ಘೋಷಣೆ ಮಾಡಿದ್ದಾರೆ. ಪಕ್ಷದ ಹೆಸರಿನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಎಂದು ಹೆಸರಿಟ್ಟಿರುವ ರೆಡ್ಡಿ, ಕಲ್ಯಾಣ ಕರ್ನಾಟಕ(ಉತ್ತರ ಕರ್ನಾಟಕ) ಮೇಲೆ ಕಣ್ಣಿಟ್ಟಂತಿದೆ. ಇನ್ನು ಯಾರ ಮತಬುಟ್ಟಿಗೆ ಕೈ ಹಾಕ್ತಾರೆ..? ರೆಡ್ಡಿ ಹೊಸ ಪಕ್ಷದಿಂದ ಯಾರಿಗೆ ನಷ್ಟ? ಯಾರಿಗೆ ಲಾಭ? ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಶುರುವಾಗಿವೆ.
ಗಣಿಧಣಿ ರೆಡ್ಡಿಯ ಹೊಸ ನಡೆ ಬಿಜೆಪಿ ಮತ್ತು ಕಾಂಗ್ರೆಸ್ ಮತಬ್ಯಾಂಕ್ ಅನ್ನು ಅಲುಗಾಡಿಸುತ್ತಾ ಎನ್ನುವ ಚರ್ಚೆ ಬಳ್ಳಾರಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಇನ್ನೂ ರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಕಾಂಗ್ರೆಸ್‌ಗೇನಾದ್ರೂ ಎಫೆಕ್ಟ್ ಆಗುತ್ತಾ ಎನ್ನುವ ಲೆಕ್ಕಾಚಾರಗಳು ನಡೆದಿವೆ. ರೆಡ್ಡಿಯವರ ಹೊಸ ಪಕ್ಷ ಸಕ್ಸಸ್ ಆಗುವುದು ಕಷ್ಟಸಾಧ್ಯ. ಆದ್ರೆ, ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಪಾತ್ರವಹಿಸಬಹುದು. ಅದರಲ್ಲೂ ಕೊಪ್ಪಳ ಬಳ್ಳಾರಿಯಲ್ಲಂತೂ ರಾಜಕೀಯ ಸಂಚಲನವಾಗಿದೆ. ಗಂಗಾವತಿ ರಾಜಕೀಯ ಅಖಾಡ ಒಂದು ಶೇಕ್ ಆಗಿದಂತೂ ಸತ್ಯ.
ಬಿಜೆಪಿ ವಿರೋಧಿ ಮತಗಳೇ ರೆಡ್ಡಿ ಟಾರ್ಗೆಟ್
ಜನಾರ್ದನ ರೆಡ್ಡಿ ಪಕ್ಷ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕ ಕೇಂದ್ರೀಕೃತವಾಗಿದ್ದು, ಬಳ್ಳಾರಿ, ರಾಯಚೂರು, ಕೊಪ್ಪಳ , ಗದಗ , ಜಿಲ್ಲೆಗಳಲ್ಲಿ ರೆಡ್ಡಿ ಕುಟುಂಬದವರ ಮತ ಬ್ಯಾಂಕನ್ನೇ ನಂಬಿಕೊಂಡು ಪಕ್ಷ ಸ್ಥಾಪನೆ ಮಾಡಿದ್ದಾರೆ ಎನ್ನಲಾಗಿದ್ದು, ಬಿಜೆಪಿ ವಿರೋಧಿ ಮತಗಳೇ ಜನಾರ್ದನ ರೆಡ್ಡಿ ಮೇನ್ ಟಾರ್ಗೆಟ್ ಆಗಿದೆ. ಅದರಲ್ಲೂ ಅಲ್ಪ ಸಂಖ್ಯಾತರ ಮತಗಳ ಮೇಲೆ ಜನಾರ್ದನ ರೆಡ್ಡಿ ಕಣ್ಣಿಟ್ಟಿದ್ದಾರೆ. ಇದಕ್ಕೆ ಪೂಕರವೆಂಬತೆ ಈಗಾಗಲೇ ಕೊಪ್ಪಳದ ಗಂಗಾವತಿಯ ದರ್ಗಾ ನವೀಕರಣಕ್ಕೆ ರೆಡ್ಡಿ ಬರೋಬ್ಬರಿ 6 ಕೋಟಿ ರೂ. ಧನ ಸಹಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲದೇ ಇತ್ತೀಚೆಗೆ ಗಂಗಾವತಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಶಾಲೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇದು ಒಂದು ಕಡೆ ಕಾಂಗ್ರೆಸ್ ವೋಟ್ ಬ್ಯಾಂಕ್ಗೆ ಹೊಡೆತ ಬೀಳುವ ಲಕ್ಷಣಗಳು ಕಾಣುತ್ತಿವೆ. ಇದು ಒಂದು ರೀತಿಯಲ್ಲಿ ಬಿಜೆಪಿಗೆ ವರದಾನವಾಗಲಿದೆ.
ಇದನ್ನೂ ಓದಿ: ಹೊಸ ಪಕ್ಷ ಸ್ಥಾಪನೆ ಜತೆಗೆ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನೂ ಘೋಷಿಸಿದ ಜನಾರ್ದನ ರೆಡ್ಡಿ
ಕಾಂಗ್ರೆಸ್ಗೆ ನಷ್ಟ, ಬಿಜೆಪಿಗೆ ವರದಾನ
ಹೌದು….ರೆಡ್ಡಿ ಅವರ ನಡೆ ನೋಡಿದರೆ ಮೇಲ್ನೋಟಕ್ಕೆ ಅವರು ಕಾಂಗ್ರೆಸ್ ವೋಟ್ ಬ್ಯಾಂಕ್ಗೆ ಕೈ ಹಾಕಿದಂತಿದೆ. ಇತ್ತೀಚೆಗೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮತಗಳನ್ನು ಸೆಳೆಯುವ ಕೆಲಸವನ್ನು ಮಾಡಿದ್ದಾರೆ. ಅದರಲ್ಲೂ ಗಂಗಾವತಿ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಮುಸ್ಲಿಂ ಸಮುದಾಯದ ಮತಗಳ ಮೇಲೆ ಈಗ ರೆಡ್ಡಿ ಕೈ ಹಾಕಿದ್ದರಿಂದ ಕಾಂಗ್ರೆಸ್ನ ಮುಸ್ಲಿಂ ಮತಗಳು ಒಡೆದು ಇಬ್ಭಾಗವಾಗಲಿವೆ. ಇದು ಕಾಂಗ್ರೆಸ್ಗೆ ಮೈನಸ್ ಆದ್ರೆ, ಬಿಜೆಪಿಗೆ ಪ್ಲಸ್ ಆಗಲಿದೆ. ಇದೇ ರೀತಿ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದಲ್ಲಿ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ಗೆ ಹೋಗುವುದಕ್ಕೆ ರೆಡ್ಡಿ ಅಡ್ಡಿಯಾಗಲಿದ್ದಾರೆ. ಅಲ್ಲದೇ ಈ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದ ಮೇಲೂ ರೆಡ್ಡಿ ಕಣ್ಣಿಟ್ಟಿದ್ದು, ಕಾಂಗ್ರೆಸ್ನ ಮತ ವಿಭಜನೆ ಆಗಲಿದೆ. ಇದರೊಂದಿಗೆ ಗಣಿಧಣಿ ಪಕ್ಷ ಕಟ್ಟಿರುವುದು ಬಿಜೆಪಿಗೆ ಅನುಕೂಲವಾಗಬಹುದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಟಿಕೆಟ್ ವಂಚಿತರಿಗೆ ರೆಡ್ಡಿ ಪಕ್ಷ ಆಸರೆ
ಯೆಸ್…ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ವಂಚಿತ ನಾಯಕರು ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಆಸರೆಯಾಗಬಹುದು. ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ವಂಚಿತ ನಾಯಕರಿಗೆ ಗಾಳ ಹಾಕಿ ತಮ್ಮ ಪಕ್ಷದಿಂದ ಅಖಾಡಕ್ಕಿಳಿಸುವ ಪ್ಲ್ಯಾನ್ ಸಹ ಇದೆ. ಇನ್ನು ಟಿಕೆಟ್ ವಂಚಿತರು ಸಹ ಪಕ್ಷೇತರವಾಗಿ ನಿಲ್ಲುವ ಬದಲಿಗೆ ಜನಾರ್ದನ ರೆಡ್ಡಿ ವರ್ಚಸ್ಸು ಚುನಾವಣೆಯಲ್ಲಿ ಅನುಕೂಲವಾಗಬಹುದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆಗಳು ಸಹ ಇವೆ.
ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ರಾಜಕೀಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ರೆಡ್ಡಿ, ಈ ಬಗ್ಗೆ ಯಾರು ಏನು ಹೇಳಿದರು?
ಬಿಜೆಪಿ ಬಿ ಟೀಮ್ ಎನ್ನುತ್ತಿರುವ ಜನರು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಜನಾದರ್ನ ರೆಡ್ಡಿ ಘೋಷಿಸುತ್ತಿದ್ದಂತೆಯೇ ಇತ್ತ ಜನರು ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಬಿಜೆಪಿ ವಿರೋಧಿ ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಮತಗಳನ್ನು ಕಾಂಗ್ರೆಸ್ ಪಾಲಾಗದಂತೆ ತಡೆಯಲು ರೆಡ್ಡಿ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿಯ ಒಂದು ಕೈ ಸಹ ಇದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದು ಪರ್ಯಾಯವಾಗಿ ಹೊಸ ಪಕ್ಷ ಹುಟ್ಟಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಒಟ್ಟಿನಲ್ಲಿ ಸದ್ಯ ಹೊಸ ಪಕ್ಷ ಘೋಷಿಸಿರುವ ರೆಡ್ಡಿ, ನಡೆ ಒಂದು ರೀತಿಯಲ್ಲಿ ಬಿಜೆಪಿಗೆ ವರದಾನವಾಗಿದ್ರೆ ಕಾಂಗ್ರೆಸ್ಗೆ ಮೈನಸ್ ಆಗುವ ಲಕ್ಷಣಗಳು ಕಾಣುತ್ತಿದ್ದು, ಅದ್ಯಾರ ಮತಬುಟ್ಟಿಗೆ ಕೈ ಹಾಕ್ತಾರೆ..? ಚುನಾವಣೆಯಲ್ಲಿ ಅದೇನ್ ಕಮಾಲ್ ಮಾಡ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:48 pm, Sun, 25 December 22