ಇನ್ನು ಐದು ವರ್ಷ ಬಿಜೆಪಿ ನಾಯಕರದ್ದು ಹೋರಾಟ ಮಾತ್ರ: ಸತೀಶ್ ಜಾರಕಿಹೊಳಿ
ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವನ್ನು ವ್ಯಂಗ್ಯವಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರದ್ದು ಇನ್ನು ಐದು ವರ್ಷ ಹೋರಾಟವೇ ಎಂದರು.
ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರವನ್ನು ವ್ಯಂಗ್ಯವಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರದ್ದಿನ್ನು ಐದು ವರ್ಷ ಹೋರಾಟವೇ ಅವರಿಗೆ ಇನ್ನೇನು ಕೆಲಸ ಇದೆ ಎಂದು ಪ್ರಶ್ನಿಸಿದ್ದಾರೆ. ಹೋರಾಟ.. ಹೋರಾಟ… ಗೆಲ್ಲುವವರೆಗೂ ಹೋರಾಟ ಅಂತಾ ಇನ್ನು ಬೋರ್ಡ್ ಬರೆದಿಡಬೇಕು. ಇನ್ನು ಐದು ವರ್ಷ ಅವರಿಗೆ ಕೆಲಸ ಏನೂ ಇಲ್ಲ ಎಂದರು.
ಬರೀ ಕೋಮುದ್ವೇಷ ಹರಡಿಸೋದು, ಗಲಾಟೆ, ಒಬ್ಬರ ವಿರುದ್ಧ ಎತ್ತಿಕಟ್ಟೋದು ಇಷ್ಟೇ ಬಿಜೆಪಿ ನಾಯಕರಿಗೆ ಗೊತ್ತಿರುವುದು. ಅವರು ಇದನ್ನೇ ಮಾಡಿದ್ದಾರೆ ಅವರಿಗೆ ಅಭಿವೃದ್ಧಿ ಅಂತೂ ಗೊತ್ತೇ ಇಲ್ಲ ಎಂದರು. ಎಮ್ಮೆ ಕೋಣ ಕಡಿದು ಹಾಕುವುದಾದರೆ ಹಸು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ ಎಂದರು.
ಚರ್ಚೆ ಮಾಡಲು ಸದನ ಇದೆ, ಕಾನೂನು ಅಲ್ಲಿ ತರಬೇಕು. ನಾವು ಹೇಳಿಕೆ ಕೊಟ್ಟರೆ ಕಾನೂನು ಅಂತೂ ಸದನದಲ್ಲಿ ಬರುತ್ತದೆ. ಕಾನೂನು ಸಚಿವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ. ಸಾಧಕ ಬಾಧಕ ನೋಡಿ ನಿರ್ಣಯಗಳು ಆಗುತ್ತದೆ. ಈಗ ಅವರೇನೋ ಹೇಳಿದರು, ಇವರೇನು ಖಾಲಿ ಇದ್ದಾರೆ ಅಂತಾ ತಕ್ಷಣ ಹಾಗೇ ಹೇಳಲಿಕ್ಕೆ ಆಗುವುದಿಲ್ಲ. ಅವರು ಸೋತಿದ್ದಾರೆ, ಕೆಲವರು ಗೆದ್ದಿದ್ದಾರೆ ಜನರಿಗೆ ಏನಾದರೂ ಒಳ್ಳೆಯ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ಗೋಹತ್ಯೆ ರಕ್ತದ ಹನಿ ಭೂಮಿ ಮೇಲೆ ಬೀಳಲು ಬಿಡೋದಿಲ್ಲ; ಕಾಂಗ್ರೆಸ್ಗೆ ಗೋ ಶಾಪ ತಟ್ಟುತ್ತೆ -ಪ್ರಮೋದ್ ಮುತಾಲಿಕ್
ನಾಲ್ಕು ವರ್ಷದ ಬಿಜೆಪಿ ಆಡಳಿತದಲ್ಲಿ ಏನೂ ಒಳ್ಳೆಯ ಕೆಲಸ ಮಾಡಲು ಆಗಿಲ್ಲ. ನಮ್ಮ ಸರ್ಕಾರದಲ್ಲಾದರೂ ಅವರು ಒಳ್ಳೆಯ ಕೆಲಸ ಮಾಡಲಿ. ಅವರು ಏನೋ ಅಂದರು, ಇವರು ಏನೋ ಅಂದರು, ಅದನ್ನೇ ಆಧಾರ ಗುರಿಯಾಗಿಟ್ಟುಕೊಂಡರೆ ಅಭಿವೃದ್ಧಿ ಬಗ್ಗೆ ಏನು ಕತೆ? ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಮಾಡಲಿಲ್ಲ, ಈಗ ವಿರೋಧ ಪಕ್ಷದಲ್ಲಿ ಇದ್ದಾಗಲೂ ಅದೇ ಪಿಕ್ಚರ್ ತೋರಿಸುವುದು ರೂಢಿ ಆಗಿದೆ, ನಾವು ಏನೂ ಮಾಡಲು ಆಗುವುದಿಲ್ಲ ಎಂದರು.
ಗ್ಯಾರಂಟಿ ಘೋಷಣೆಯಿಂದ ಬಿಜೆಪಿಗೆ ಶಾಕ್ ಆಯ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಕ್ ಆಗಿಯೇ ಆಗುತ್ತೆ, ಜನರ ಕಲ್ಯಾಣಕ್ಕಾಗಿ ದೊಡ್ಡ ಮೊತ್ತ ಕೊಡುತ್ತಿದ್ದೇವೆ. ಅವರಿಗೆ ಎಲ್ಲೋ ಆತಂಕ ಇದೆ, ಅದನ್ನ ಡೈವರ್ಟ್ ಮಾಡಲು ಹೊಸ ಅಸ್ತ್ರ ಹೂಡುತ್ತಾರೆ. 15 ದಿನಗಳಲ್ಲಿ ಫಲಿತಾಂಶ ಮರೆಸಿದರೂ ಗ್ಯಾರಂಟಿ ಹಿಡಿದುಕೊಂಡು ಕುಳಿತರು. ಈಗ ಗ್ಯಾರಂಟಿ ಕೊಟ್ಟಿದ್ದೇವೆ, ಬೇರೆ ವಿಚಾರ ಇಟ್ಟುಕೊಂಡು ಬರುತ್ತಾರೆ. ನಮ್ಮ ಗ್ಯಾರಂಟಿ ಯೋಜನೆ ಬೇರೆ ರಾಜ್ಯಗಳಿಗೂ ಮಾದರಿ ಆಗುತ್ತದೆ. ಕರ್ನಾಟಕ ಮಾಡಲ್ ಬಂದೇ ಬರುತ್ತೆ, ಕರ್ನಾಟಕ ಮಾಡಲ್ ಫೇಮಸ್ ಆಗಿಯೇ ಆಗುತ್ತದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ