ಬೆಂಗಳೂರು ಅ.19: ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ (CM Ibrahim) ಅವರನ್ನು ಉಚ್ಚಾಟನೆ ಮಾಡಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದರು. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ನೇತೃತ್ವದಲ್ಲಿ ಇಂದು (ಅ.19) ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಕ್ಷದ ಜವಾಬ್ದಾರಿ ಸ್ಥಾನವನ್ನು ನಾವು ಮಾರ್ಪಾಡು ಮಾಡಬೇಕಿದೆ ಎಂದರು.
ಕೆಲವು ಘಟಕಗಳ ಜೊತೆ ಚರ್ಚಿಸಿ ಒಂದು ನಿರ್ಣಯ ಮಾಡಿದ್ದೇವೆ. ಪಕ್ಷದ ನಿಯಮಾವಳಿ ಕೂಡ ಇದೆ. ಇಬ್ರಾಹಿಂ ಹೇಳಿಕೆಗಳನ್ನು ನಾನು ಪ್ರಸ್ತಾಪ ಮಾಡಲು ಹೋಗಲ್ಲ. ನಾವು ಬಿಜೆಪಿ ಜೊತೆ ಹೋಗುವ ಸನ್ನಿವೇಶ ಸೃಷ್ಟಿಸಿದ್ದು ಯಾರು ? ನಾವು ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಭಾಗಿಯಾಗಿಲ್ಲ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ ಅಷ್ಟೇ. ಇದರಿಂದ ಜೆಡಿಎಸ್ ಸಿದ್ಧಾಂತ ಅಥವಾ ನಾಯಕರಿಗೆ ಯಾವುದೇ ಸಮಸ್ಯೆಯಿಲ್ಲ. ಮುಸ್ಲಿಂ ನಾಯಕರನ್ನು ನಮ್ಮ ಪಕ್ಷದಲ್ಲಿ ಕಡೆಗಣನೆ ಮಾಡಿಲ್ಲ. ಪಕ್ಷ ಉಳಿಸಿಕೊಳ್ಳಬೇಕಾಗಿರುವುದರಿಂದ ಮೈತ್ರಿಮಾಡಿಕೊಂಡಿದ್ದೇವೆ ಎಂದರು.
18 ಶಾಸಕರು, ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಪಡೆದಿದ್ದೇವೆ. ಪಕ್ಷ ಸಂಘಟನೆ ದೃಷ್ಟಿಯಿಂದ ದಸರಾ ನಂತರ ಹಲವಾರು ನಿರ್ಣಯ ಕೈಗೊಳ್ಳಲಾಗುವುದು. ಇಂದು ನಡೆದ ಸಭೆಯಲ್ಲಿ ಜೆಡಿಎಸ್ನ 19 ಶಾಸಕರ ಪೈಕಿ 18 ಶಾಸಕರು
ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸಭೆಗೆ ಆಗಮಿಸಿ ಸಲಹೆ ನೀಡಿದರು ಎಂದು ತಿಳಿಸಿದರು.
ಮೈತ್ರಿ ವಿಚಾರವಾಗಿ ಎಲ್ಲರ ಬಳಿ ಸಮಾಲೋಚನೆ ಮಾಡಲಾಗಿದೆ. ಚುನಾವಣೆ ಬಳಿಕ 19 ಜನ ಶಾಸಕರು, ಅಧ್ಯಕ್ಷರನ್ನ ಒಳಗೊಂಡಂತೆ ಎರಡು ಮೀಟಿಂಗ್ ಮಾಡಲಾಗಿತ್ತು. ಅದರ ಬಗ್ಗೆ ವಿವರ ಕೊಡುವ ಅವಶ್ಯಕತೆ ಇಲ್ಲ. ಕೇರಳ, ಮಹಾರಾಷ್ಟ್ರ ಅನೇಕ ಕಡೆ ನಮ್ಮ ಯುನಿಟ್ ಇದೆ. ಕೇರಳದಲ್ಲಿ ಸರ್ಕಾರದಲ್ಲಿ ನಮ್ಮ ಪಕ್ಷದ ಶಾಸಕರು ಇದ್ದಾರೆ. ಬಿಜೆಪಿ ಜೊತೆ ಹೋಗುವ ಸನ್ನಿವೇಶ ಹೇಗಿತ್ತು ಅನ್ನೋದನ್ನ ಕೇರಳ ಯುನಿಟ್ಗೆ ತಿಳಿಸಲಾಯ್ತು. ಕೇರಳದ ಎಡ ಪಂಥೀಯ ಪಕ್ಷದ ಜೊತೆ ಕೆಲಸ ಮಾಡಿರುವ ಶಾಸಕರ ಬಳಿಯೂ ಒಪ್ಪಿಗೆ ಪಡೆಯಲಾಗಿದೆ. ಮುಸ್ಲಿಂರಿಗೆ ಅನಾಹುತ ಆಗುತ್ತೆ ಅಂತ ಹೇಳಿಕೊಳ್ಳಬಹುದು. ನಾನು ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಟ್ಟು ಹೋಗಲ್ಲ ಅಂತ ನಮ್ಮ ಪಕ್ಷದ ಪ್ರಣಾಳಿಕೆ ರೆಡಿ ಮಾಡಿದ ಫರೂಕ್ ಅವರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Thu, 19 October 23