ಸತೀಶ್ ಜಾರಕಿಹೊಳಿ ಭಿನ್ನಮತ ವದಂತಿ ಬಗ್ಗೆ ಏನಂದ್ರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್?
135 ಎಂಎಲ್ಎಗಳು ಗೆಲ್ಲುವುದಕ್ಕೆ ಡಿಕೆ ಶಿವಕುಮಾರ್ ಅವರು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆ ಇಲ್ವಾ? ಡಿ.ಕೆ.ಶಿವಕುಮಾರ್ ಏನು ಹಸ್ತಕ್ಷೇಪ ಮಾಡಿದ್ದಾರೆ ತೋರಿಸಿ ನೋಡೋಣ ಎಂದು ಲಕ್ಷ್ಮೀ ಸವಾಲೆಸೆದಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ಕಾಂಗ್ರೆಸ್ ನಾಯಕ, ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಭಿನ್ನಮತ ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪ್ರತಿಕ್ರಿಯಿಸಿದ್ದು, ಇದೆಲ್ಲ ಕಟ್ಟುಕಥೆ ಎಂದಿದ್ದಾರೆ. ಬಂಡಾಯದ ಕುರಿತು ಕೇಳಲಾದ ಪ್ರಶ್ನೆಗೆ ಬೆಂಗಳೂರಿನಲ್ಲಿ ಉತ್ತರಿಸಿದ ಅವರು, ಸತೀಶ್ ಜಾರಕಿಹೊಳಿಯಿಂದ ಶಕ್ತಿ ಪ್ರದರ್ಶನ ಎಂಬ ವಿಚಾರ ಕಟ್ಟು ಕಥೆ. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಾಸಕರನ್ನು ಎತ್ತಿ ಕಟ್ಟುತ್ತಿದ್ದಾರೆ ಅಂತ ಎಷ್ಟು ಚಂದ ಕೇಳ್ತೀರಿ. ಸತೀಶ್ ಅವರ ಜೊತೆಗೆ ನಾನೂ ಹೋಗ್ತಾ ಇದ್ದೆ ಗೊತ್ತಾ ನಿಮಗದು? ಮೈಸೂರಿಗೆ ರೈಲು ಟಿಕೆಟ್ ಬುಕ್ ಮಾಡ್ತಿದ್ದೇವೆ ಬರ್ತೀರಾ ಅಂದಾಗ ನಾನೂ ಬರ್ತೀನಿ ಅಂದಿದ್ದೆ. 15 ನೇ ತಾರೀಕು ರಾತ್ರಿ ನಾನೂ ಕೂಡ ಟ್ರೈನ್ ಗೆ ಬರೋದಿತ್ತು. 16ಕ್ಕೆ ನನ್ನ ಶುಗರ್ ಫ್ಯಾಕ್ಟರಿ ಬಾಯ್ಲರ್ ಉದ್ಘಾಟನೆ ಅಂತ ನಾನು ಹೋಗಲಿಲ್ಲ. ಇಷ್ಟೇ ಆಗಿದ್ದು ಎಂದು ಹೇಳಿದ್ದಾರೆ.
ಇದರಲ್ಲಿ ಭಿನ್ನಮತ ಏನೂ ಇಲ್ಲ, ಇದೆಲ್ಲ ಕೇವಲ ವದಂತಿ ಅಷ್ಟೇ. ನಾನು ಡಿಕೆ ಶಿವಕುಮಾರ್ ವಿರುದ್ಧ ಅಂತ ಮಾತನಾಡ್ತೀರಲ್ಲ ಇದು ಸಾಧ್ಯಾನಾ? ಸತೀಶಣ್ಣ ಬಹಳ ಮುತ್ಸದ್ದಿ ರಾಜಕಾರಣಿ, ಉನ್ನತ ಸ್ಥಾನದಲ್ಲಿ ಇದ್ದಾರೆ. ಇಷ್ಟು ಕೆಳಮಟ್ಟಕ್ಕೆ ಹೋಗಿ ರಾಜಕಾರಣ ಮಾಡುವ ಅವಶ್ಯಕತೆ ಅವರಿಗೂ ಇಲ್ಲ. ಸತೀಶಣ್ಣ 6 ಬಾರಿ ಶಾಸಕರು, ಅವರು ಬಹಳ ಅನುಭವ ಇರುವವರು. ನಾನು 2 ಬಾರಿ ಶಾಸಕಿಯಾಗಿ ಸಚಿವೆ ಆಗಿದ್ದೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಯಾವ ಅರ್ಥದಲ್ಲಿ ಕಾಂಪ್ರಮೈಸ್ ಅಂತ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಒಳ್ಳೆ ಭಾವನೆಯಲ್ಲಿ ಹೇಳಿದ್ದಾರೆಂದು ಭಾವಿಸಿದ್ದೇನೆ. ಜಿಲ್ಲೆಯಲ್ಲಿ ಯಾವುದೋ ಅಧಿಕಾರಿ ಅವರು ಹಾಕಿದಾಗ ಎಸ್ ಅಂತೇನೆ. ನಾನು ಯಾವುದೋ ಅಧಿಕಾರಿ ಹಾಕಿದಾಗ ಅವರು ಎಸ್ ಅಂತಾರೆ. ಅದೇ ಕಾಂಪ್ರಮೈಸ್ ಅಷ್ಟೇ. ಕಾಂಪ್ರಮೈಸ್ ಅಂದ್ರೆ ಯಾವ ತರಹ ಅಂತ ಸತೀಶಣ್ಣನ ಬಳಿ ಬಿಡಿಸಿ ಕೇಳಿ. ನಾನು ಯಾವುದಾದರೂ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಿದ್ದೀನಾ? ಜಿಲ್ಲಾಡಳಿತದಲ್ಲೇನಾದ್ರೂ ತೊಂದರೆ ಆಗ್ತಿದ್ಯಾ ಅಂತ ಮತ್ತೊಮ್ಮೆ ಕೇಳಿ. ಸುಮ್ಮನೇ ಡಿ.ಕೆ.ಶಿವಕುಮಾರ್ರನ್ನು ಇದರಲ್ಲಿ ಯಾಕೆ ಎಳೆದು ತರ್ತೀರಾ? ಕೆಪಿಸಿಸಿ ಅಧ್ಯಕ್ಷರು ಇಡೀ ರಾಜ್ಯ ಸುತ್ತಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
135 ಎಂಎಲ್ಎಗಳು ಗೆಲ್ಲುವುದಕ್ಕೆ ಡಿಕೆ ಶಿವಕುಮಾರ್ ಅವರು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆ ಇಲ್ವಾ? ಡಿ.ಕೆ.ಶಿವಕುಮಾರ್ ಏನು ಹಸ್ತಕ್ಷೇಪ ಮಾಡಿದ್ದಾರೆ ತೋರಿಸಿ ನೋಡೋಣ ಎಂದು ಲಕ್ಷ್ಮೀ ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಜೊತೆ ಯಾವ ವೈಮನಸ್ಸೂ ಇಲ್ಲ, ಅದು ಬಿಜೆಪಿ ಹಾಗೂ ಮಾಧ್ಯಮದ ಸೃಷ್ಟಿ: ಡಿಕೆ ಶಿವಕುಮಾರ್, ಡಿಸಿಎಂ
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದೂ ಇತ್ತೀಚೆಗೆ ವರದಿಗಳಾಗಿದ್ದವು. ಈ ಮಧ್ಯೆ, ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಸತೀಶ್ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸತೀಶ್ ಜಾರಕಿಹೊಳಿ ಶಾಸಕರ ಮೈಸೂರು ಪ್ರವಾಸ ಆಯೋಜಿಸಿದ್ದು ಚರ್ಚೆಗ ಗ್ರಾಸವಾಗಿತ್ತು. ಬಳಿಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಧ್ಯ ಪ್ರವೇಶಿಸಿ ಶಾಸಕರ ಪ್ರವಾಸಕ್ಕೆ ಬ್ರೇಕ್ ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ