ಬೆಂಗಳೂರು: ಶೃಂಗೇರಿ ಮಠ ಒಡೆದ ಮತ್ತು ಮಹಾತ್ಮ ಗಾಂಧೀಜಿಯನ್ನು ಕೊಂದ ಬ್ರಾಹ್ಮಣ ಸಮುದಾಯದವರನ್ನು ಸಿಎಂ ಮಾಡಲು ಆರ್ಎಸ್ಎಸ್ ಹುನ್ನಾರ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಮತ್ತು ಸಂಚಲನವನ್ನು ಸೃಷ್ಟಿಸಿತ್ತು. ಸದ್ಯ ಈ ವಿಚಾರವಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರೊ. ಎಸ್. ಆರ್. ಲೀಲಾ ಅವರು ವಿಡಿಯೋ ಒಂದನ್ನು ಹರಿಬಿಡುವ ಮೂಲಕ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಗಾಂಧಿಯನ್ನು ಕೊಂದವನು ಬ್ರಾಹ್ಮಣ, ಅಂತಹ ಬ್ರಾಹ್ಮಣರು ಸಿಎಂ ಸ್ಥಾನಕ್ಕೆ ಬರಬಾರದು ಎಂದು ಕುಮಾರಣ್ಣ ನೀವು ಹೇಳಿದ್ದಾರೆ. ಆದರೆ, ವಿಶ್ವ ವಿಖ್ಯಾತ ಎಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯ, ನೊಬೆಲ್ ಪ್ರಶಸ್ತಿ ಪಡೆದ ಸರ್. ಸಿ. ವಿ. ರಾಮನ್ ಅವರ ಹೆಸರುಗಳನ್ನು ಹೇಳುವಾಗ ನೀವು ಬ್ರಾಹ್ಮಣ ಅಂತ ಹೇಳುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾಥೂರಾಮ್ ಗೋಡ್ಸೆ ಬ್ರಾಹ್ಮಣ ಗಾಂಧಿಯನ್ನ ಕೊಂದಿದ್ದು ಎಂದು ಹೇಳುತ್ತಿರಾ. ನಾನು ಎಲ್ಲಾ ಬ್ರಾಹ್ಮಣರ ಬಗ್ಗೆ ಮಾತನಾಡಿಲ್ಲ ಗೋಡ್ಸೆ ಅಂತಹ ಡಿಎನ್ಎ ಇರುವ ಬ್ರಾಹ್ಮಣರು ಸಿಎಂ ಆಗಬಾರದು ಎಂದು ಹೇಳಿದ್ದೇನೆ ಎಂದು ನೀವು ಹೇಳಿದ್ದೀರಿ ಎಂದರು.
ಇದನ್ನೂ ಓದಿ: ಏರ್ ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ? : ಹೆಚ್. ಡಿ ಕುಮಾರಸ್ವಾಮಿ
ಇನ್ನು ಈ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಬಂದರೆ ಮುಸ್ಲಿಂ ಸಮುದಾಯದವರನ್ನು ಸಿಎಂ ಮಾಡುತ್ತೇನೆ ಎಂದು ನೀವು ಹೇಳಿದ್ದೀರಿ. ಈ ನಿಮ್ಮ ಹೇಳಿಕೆಗೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ನಾನಂತೂ ನಿಮ್ಮ ಮಾತನ್ನ ಕೇಳಿ ದಂಗಾದೆ ಎಂದರು. ಟಿಪ್ಪುವನ್ನು ಕೊಂದವರು, ಕೊನೆಯ ಹೊಡೆತ ಕೊಟ್ಟವರು ಉರಿಗೌಡ ಹಾಗೂ ನಂಜೇಗೌಡ. ಆ ಗೌಡ ಎನ್ನುವ ಡಿಎನ್ಎ ತಮ್ಮಲ್ಲಿ ಇಲ್ಲವೆ ಎಂದು ಪ್ರಶ್ನಿಸಿದರು. ಇನ್ನು ಇಂತಹ ಮಾತುಗಳನ್ನು ಜನ ನಂಬುತ್ತಾರಾ? ನಂಬುವ ಹಾಗಿದ್ರೆ ಜಮೀರ್ ಅಹ್ಮದ್ ಅಂತಹವರು ನಿಮ್ಮ ಪಕ್ಷವನ್ನು ಯಾಕೆ ಬಿಟ್ಟು ಹೋದರು. ಏನೋ ಮಾತನಾಡಬೇಕು ಎಂದು ಮಾತನಾಡಬಾರದು ಎಂದು ಹೇಳಿದರು.
ಇನ್ನೊಂದು ವಿಷಯ ಬ್ರಾಹ್ಮಣ ಬ್ರಾಹ್ಮಣ ಎಂದು ಹೇಳುತ್ತೀರಲ್ಲ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಸಾಕಷ್ಟು ಮಹನೀಯರಲ್ಲಿ ಬ್ರಾಹ್ಮಣರಿದ್ದಾರೆ. ಝಾನ್ಸಿರಾಣಿ ಲಕ್ಷ್ಮಿಬಾಯಿಯ ಸೇನಾಪತಿಯಾಗಿದ್ದ ತಾತ್ಯಾ ಟೋಪೆ, ಬ್ರಿಟಿಷರೊಂದಿಗೆ ಹೋರಾಡಿದ ಸಿಪಾಯಿ ಮಂಗಲ್ ಪಾಂಡೆ ಇವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಅಷ್ಟೇ ಯಾಕೆ ವೀರ್ ಸಾವರ್ಕರ್ ಕೂಡ ಬ್ರಾಹ್ಮಣರಾಗಿದ್ದಾರೆ ಎಂದರು.
ಇದನ್ನೂ ಓದಿ: ಜೆಡಿಎಸ್ ಪಕ್ಷವನ್ನು ಪದೇ ಪದೇ ಕೆಣಕುತ್ತಿದ್ದಾರೆ, ಹೀಗೆ ಮಾಡಿದ್ರೆ ಸಿದ್ದರಾಮಯ್ಯ ಮನೆಗೆ ಹೋಗಬೇಕಾಗುತ್ತೆ: ಕುಮಾರಸ್ವಾಮಿ
ಇನ್ನು ನಿಮ್ಮ ಇಡೀ ಕುಟುಂಬದಲ್ಲಿ ಎಲ್ಲರಿಗೂ ಮುಸ್ಲಿಂರ ಬಗ್ಗೆ ಸಾಕಷ್ಟು ಪ್ರೀತಿಯಿದೆ. ಈ ಹಿಂದೆ ಮಾಜಿ ಪ್ರಧಾನಿ ಹೆಚ್. .ಡಿ.ದೇವೇಗೌಡ ಅವರು ಮುಂದಿನ ಜನ್ಮದಲ್ಲಾದರೂ ಮುಸಲ್ಮಾನನಾಗಿ ಜನಿಸಬೇಕು ಎಂದು ಹೇಳಿದ್ದರು. ಅದಕ್ಕೆ ಮುಂದಿನ ಜನ್ಮದವರೆಗೆ ಕಾಯುವ ಅವಶ್ಯಕತೆಯಿಲ್ಲ. ಹಿರಿಯರು ಆಸೆಪಡುವಾಗ ನೀವು ಅವರಿಗೆ ಈಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಅವಕಾಶ ಮಾಡಿಕೊಡಿ ಎಂದು ಎಸ್. ಆರ್. ಲೀಲಾ ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:31 pm, Mon, 13 February 23