ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ್ದರೆ ದೂರು ನೀಡಿ: ಪ್ರಲ್ಹಾದ್ ಜೋಶಿ

|

Updated on: Jun 20, 2023 | 3:47 PM

ರಾಜ್ಯ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಸೈಬರ್ ಕ್ರೈಂ ವಿಭಾಗಕ್ಕೆ ದೂರು ಕೊಟ್ಟು ತನಿಖೆ ನಡೆಸಲಿ ಎಂದಿದ್ದಾರೆ.

ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ್ದರೆ ದೂರು ನೀಡಿ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ ಮತ್ತು ಸತೀಶ್ ಜಾರಕಿಹೊಳಿ
Follow us on

ಹುಬ್ಬಳ್ಳಿ: ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದರೆ ದೂರು ನೀಡಲಿ ಎಂದು ಹೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಡಿದ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಟಿವಿ9 ಜೊತೆ ಮಾತನಾಡಿದ ಅವರು, ಹ್ಯಾಕ್ ಆಗಿದ್ದರೆ ಸೈಬರ್​ ಕ್ರೈಂ ವಿಭಾಗಕ್ಕೆ ದೂರು ನೀಡಿ ತನಿಖೆ ಮಾಡಿಸಲಿ. ಸತೀಶ್ ಜಾರಕಿಹೊಳಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಗ್ಯಾರಂಟಿಗಳನ್ನು ಜಾರಿಗೆ ತರಲು ಕುಂಟು ನೆಪ ಹೇಳುತ್ತಿದ್ದಾರೆ ಎಂದರು.

ಪ್ಲ್ಯಾನ್ ಮಾಡದೇ ಯೋಜನಗಳನ್ನ ಜಾರಿಗೆ ತರುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದ ಸತೀಶ್ ಜಾರಕಿಹೊಳಿ, ಪ್ಲ್ಯಾನ್ ಮಾಡಿದ್ದೇವೆ. ಆದರೆ ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಥಗಿತ ಮಾಡಿದ್ದಾರೆ. ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಡಿಪಾರ್ಟ್‌ಮೆಂಟ್ ಸರ್ವರ್​ ಕೂಡ ಹ್ಯಾಕ್ ಮಾಡಲಾಗಿದೆ. ಅದನ್ನ ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಹಾಗಾಗಿ ತಡವಾಗುತ್ತಿದೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ‌ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ ಕೇಂದ್ರ ಸರ್ಕಾರ: ಸತೀಶ್ ಜಾರಕಿಹೊಳಿ ಆರೋಪ

ರಾಜ್ಯ ಕಾಂಗ್ರೆಸ್​ ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಪೂರೈಸಲು ಹರಸಾಹಸ ಪಡುತ್ತಿದೆ. ಅನ್ನ ಭಾಗ್ಯ ಯೋಜನೆ ಜಾರಿ ಮಾಡಲು ರಾಜ್ಯದಲ್ಲಿ ಅಕ್ಕಿ ಕಡಿಮೆಯಾಗಿದ್ದು ಅನ್ಯ ರಾಜ್ಯಗಳ ಮೊರೆ ಹೋಗಿದೆ. ಈ ನಡುವೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಆದರೆ ಸರ್ವಸ್ ಬಿಜಿ ಹಿನ್ನೆಲೆ ಜನರು ಅರ್ಜಿ ಹಾಕಲು ಪರದಾಡುವಂತಾಗಿದೆ. ಅನೇಕರಿಗೆ ಅರ್ಜಿಸಲ್ಲಿಸಲಾಗುತ್ತಿಲ್ಲ. ಪೂರ್ವ ಸಿದ್ದತೆಗಳಿಲ್ಲದೇ ಗ್ಯಾರಂಟಿಗಳಿಗೆ ದಿನಾಂಕ ಘೋಷಿಸಿ ಕಾಂಗ್ರೆಸ್ ಪೀಕಲಾಟಕ್ಕೆ ಗುರಿಯಾಗಿದೆ. ತಾನೇ ಕೊಟ್ಟ ಡೆಡ್ ಲೈನ್​ಗಳ ಒತ್ತಡದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Tue, 20 June 23