ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ ಕೇಂದ್ರ ಸರ್ಕಾರ: ಸತೀಶ್ ಜಾರಕಿಹೊಳಿ ಆರೋಪ
ಅಕ್ಕಿ ವಿಚಾರದಲ್ಲಿ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪಗಳ ನಡುವೆ "ನಮ್ಮ ಸರ್ಕಾರದ ಸರ್ವರ್ರನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ" ಅಂತಾ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ: ಅಕ್ಕಿ ವಿಚಾರದಲ್ಲಿ ಕೇಂದ್ರದ ಜೊತೆ ವಾಗ್ವಾದಕ್ಕಿಳಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ (Karnataka Congress Govt), ತಾನು ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿ ಮಾಡಲು ಹರಸಾಹಸ ಪಡುತ್ತಿದೆ. ಈ ನಡುವೆ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ಸರ್ವರ್ ಬ್ಯುಸಿ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರವು ನಮ್ಮ ಸಿಸ್ಟಮ್ಗಳನ್ನು ಹ್ಯಾಕ್ ಮಾಡಿದೆ ಎಂದು ಹೇಳುವ ಮೂಲಕ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಪ್ಲ್ಯಾನ್ ಮಾಡದೇ ಯೋಜನಗಳನ್ನ ಜಾರಿಗೆ ತರುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಪ್ಲ್ಯಾನ್ ಮಾಡಿದ್ದೇವೆ, ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಥಗಿತ ಮಾಡಿದ್ದಾರೆ. ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಡಿಪಾರ್ಟ್‌ಮೆಂಟ್ ಕೂಡ ಹ್ಯಾಕ್ ಮಾಡಿದೆ. ಹಾಗಾಗಿ ತಡವಾಗುತ್ತಿದೆ. ಅದನ್ನ ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ಎಂದರು.
ಇದನ್ನೂ ಓದಿ: ಗ್ಯಾರಂಟಿಗಳ ಒತ್ತಡದಲ್ಲಿ ಕಾಂಗ್ರೆಸ್: ಗೃಹಜ್ಯೋತಿ ಯೋಜನೆ ಸರ್ವರ್ ಬಿಜಿ, ಇತರೆ ಯೋಜನೆಗಳು ಇನ್ನೂ ವಿಳಂಬ
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟೀಕಿಸಿದ್ದಾರೆ. ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಕೇಂದ್ರ ತಡೆಯುತ್ತಿದೆ. ಕೇಂದ್ರಕ್ಕೆ ಬಿಸಿ ಮುಟ್ಟುತ್ತೋ ಇಲ್ಲವೋ ಆಮೇಲೆ ನೋಡೋಣ. ರಾಜ್ಯದ 25 ಬಿಜೆಪಿ ಸಂಸದರು ಕಣ್ಣು ತೆರೆಯಲಿ. ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಇದೆ. ಚುನಾವಣೆ ವೇಳೆ ಜನರ ಓಲೈಕೆ ಮಾಡಲು ಬರುತ್ತಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಗೃಹಲಕ್ಷ್ಮೀ ಯೋಜನೆ ಜಾರಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಕಳೆದ 27ರಂದು ಅಸ್ತಿತ್ವಕ್ಕೆ ಬಂದಿದೆ. ನಮಗೆ ಜವಾಬ್ದಾರಿ ಹಂಚಿಕೆ ಮಾಡಿದ್ದು 29ರಂದು. ಇವತ್ತು 20 ದಿನಾಂಕ. ನೀವೇ ಯೋಚಿಸಿ ಎಷ್ಟು ದಿನ ಆಯ್ತು ಅಂತ. ಎಲ್ಲಾ ಯೋಜನೆ ಜಾರಿ ಮಾಡುತ್ತೇವೆ. ಹುಟ್ಟಿದ ಮಗು ಏಕಾಏಕಿ ದೊಡ್ಡದಾಗಲ್ಲ. ಎಲ್ಲಾ ರೀತಿಯಾಗಿ ಹೆಚ್ಚು ಕಡಿಮೆ ಆಗುತ್ತದೆ. ಕೊಟ್ಟ ವಚನ ಉಳಿಸಿಕೊಳ್ಳುವ ನಮ್ಮ ಸಿಎಂ ಅವರ ಧೈರ್ಯವನ್ನು ಮೆಚ್ಚಬೇಕು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ