26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್
‘26/11 ಉಗ್ರರ ದಾಳಿ ನಡೆದ ದಿನ ನೀವು ಎಲ್ಲಿದ್ರಿ?’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕಂಗನಾ ರಣಾವತ್ ಉತ್ತರಿಸಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಉಗ್ರರ ದಾಳಿಯನ್ನು ಆಧರಿಸಿದ ಸಿನಿಮಾದಲ್ಲಿ ಕಂಗನಾ ಅವರು ನಟಿಸಿದ್ದು, ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ‘ಭಾರತ್ ಭಾಗ್ಯ ವಿಧಾತ’ (Bharat Bhagya Vidhata) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಈ ವಿಷಯ ಹೇಳಿದ್ದಾರೆ. ದೇಶವನ್ನೇ ನಡುಗಿಸಿದ್ದ 2008ರ 26/11 ಮುಂಬೈ ಉಗ್ರರ ದಾಳಿಯ ಕರಾಳ ರಾತ್ರಿಗೆ ಸಂಬಂಧಿಸಿದಂತೆ ತಮ್ಮ ನೆನಪೊಂದನ್ನು ಅವರು ಹಂಚಿಕೊಂಡಿದ್ದಾರೆ. ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಆ ಸಮಯದಲ್ಲಿ ತಾವು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವಿಷಯವನ್ನು ಕಂಗನಾ (Kangana Ranaut) ಬಹಿರಂಗಪಡಿಸಿದ್ದಾರೆ.
ಆ ಕರಾಳ ರಾತ್ರಿಯನ್ನು ನೆನಸಿಕೊಂಡ ಕಂಗನಾ, ‘ಅಂದು ನಟಿ ಶಹಾನಾ ಗೋಸ್ವಾಮಿ ಅವರು ಯಾರಿ ರೋಡ್‌ನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಆ ಖುಷಿಯಲ್ಲಿ ಅವರು ವಿಶೇಷ್ ಫಿಲ್ಮ್ಸ್ ಬ್ಯಾನರ್‌ನ ಆಪ್ತ ನಟ-ನಟಿಯರಿಗೆ ಹೌಸ್ ಪಾರ್ಟಿ ಆಯೋಜಿಸಿದ್ದರು. ನಾವೆಲ್ಲರೂ ಹಾಡು, ಡ್ಯಾನ್ಸ್ ಮಾಡುತ್ತಾ ಪಾರ್ಟಿ ಮೂಡ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದೆವು’ ಎಂದಿದ್ದಾರೆ.
‘ನಾವು ಪಾರ್ಟಿ ಮಾಡುತ್ತಿದ್ದ ಜಾಗಕ್ಕೆ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ಬಂದರು. ತಕ್ಷಣವೇ ಪಾರ್ಟಿ ನಿಲ್ಲಿಸಿ, ಟಿವಿ ಆನ್ ಮಾಡುವಂತೆ ನಮಗೆ ತಿಳಿಸಿದರು. ನಾವು ಟಿವಿ ಹಾಕಿದಾಗ ಇಡೀ ಮುಂಬೈನಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಲೈವ್ ನ್ಯೂಸ್ ಬಿತ್ತರವಾಗುತ್ತಿತ್ತು. ಅದನ್ನು ನೋಡಿ ನಾವೆಲ್ಲರೂ ಒಂದು ಕ್ಷಣ ದಿಗ್ಭ್ರಮೆಗೊಂಡೆವು’ ಎಂದು ಕಂಗನಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
‘ಆರಂಭದಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ನಮಗೆ ಅರ್ಥವಾಗಲಿಲ್ಲ. ಪಾರ್ಟಿ ಮುಂದುವರಿಸಬೇಕೇ ಅಥವಾ ಮನೆಗೆ ಹೋಗಬೇಕೇ ಎಂದು ನಮ್ಮ ನಡುವೆ ಚರ್ಚೆ ನಡೆಯುತ್ತಿತ್ತು. ಆದರೆ ಮಹೇಶ್ ಭಟ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ತಕ್ಷಣವೇ ಎಲ್ಲರಿಗೂ ಪಾರ್ಟಿ ನಿಲ್ಲಿಸಿ ಮನೆಗೆ ಮರಳುವಂತೆ ಖಡಕ್ ಆಗಿ ಸೂಚಿಸಿದರು. ಅವರ ಮಾತನ್ನು ಕೇಳಿ ನಾವೆಲ್ಲರೂ ಅಲ್ಲಿಂದ ಹೊರಟೆವು. ಒಂದು ವೇಳೆ ಅಂದು ಮಹೇಶ್ ಭಟ್ ನಮಗೆ ಮಾಹಿತಿ ನೀಡದಿದ್ದರೆ, ಮುಂಬೈನಲ್ಲಿ ಅಷ್ಟು ದೊಡ್ಡ ದುರಂತ ನಡೆಯುತ್ತಿರುವುದು ನಮಗೆ ತಡವಾಗಿ ತಿಳಿಯುತ್ತಿತ್ತು’ ಎಂದು ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೊಂದು ರಾಷ್ಟ್ರ ಪ್ರಶಸ್ತಿ ಗ್ಯಾರಂಟಿ; ಕಂಗನಾ ಹೊಸ ಸಿನಿಮಾ ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ
‘ಭಾರತ್ ಭಾಗ್ಯ ವಿಧಾತ’ ಚಿತ್ರದ ಕಥೆ: ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾವು 26/11ರ ಮುಂಬೈ ಉಗ್ರರ ದಾಳಿಯ ನೈಜ ಘಟನೆಗಳನ್ನು ಆಧರಿಸಿ ತಯಾರಾಗಿದೆ. ದಾಳಿಯ ಸಮಯದಲ್ಲಿ ಮುಂಬೈನ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯರು ಪ್ರಾಣದ ಹಂಗು ತೊರೆದು ನೂರಾರು ಜನರ ಜೀವ ಉಳಿಸಲು ತೋರಿದ ಅಪ್ರತಿಮ ಧೈರ್ಯ ಮತ್ತು ಹೋರಾಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ಕಂಗನಾ ಅವರು ನರ್ಸ್ ಪಾತ್ರವನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




