ಅಕ್ಕಿ ಫೈಟ್ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ ಆಹಾರ ಸಚಿವ ಮುನಿಯಪ್ಪ ಕೂಡ ಕೇಂದ್ರ ಆಹಾರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮುನಿಯಪ್ಪ ಮನವಿ ಮಾಡಲಿದ್ದಾರೆ ಎಂದೂ ಸಿದ್ದರಾಮಯ್ಯ​ ತಿಳಿಸಿದ್ದಾರೆ.

ಅಕ್ಕಿ ಫೈಟ್ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ & ಅಮಿತ್ ಶಾ
Follow us
Ganapathi Sharma
|

Updated on:Jun 20, 2023 | 2:50 PM

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಮುಂದುವರಿದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿಗೆ ಮುಹೂರ್ತ ನಿಗದಿಯಾಗಿದೆ. ಉಭಯ ನಾಯಕರು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಾಹಿತಿ ನೀಡಿದ್ದು, ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅರನ್ನು ಭೇಟಿಯಾಗುತ್ತಿದ್ದೇನೆ. ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಸೌಹಾರ್ದಯುತವಾಗಿ ಭೇಟಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಆಹಾರ ಸಚಿವ ಮುನಿಯಪ್ಪ ಕೂಡ ಕೇಂದ್ರ ಆಹಾರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮುನಿಯಪ್ಪ ಮನವಿ ಮಾಡಲಿದ್ದಾರೆ ಎಂದೂ ಸಿದ್ದರಾಮಯ್ಯ​ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಾಗಾಟದ ಕಾರಣದಿಂದಾಗಿ ಅಕ್ಕಿ ವಿತರಣೆ ತುಸು ತಡವಾಗಬಹುದು. ನಾವು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್​​ಗಢದ ಜೊತೆ ಮಾತನಾಡಿದ್ದೇವೆ. ಪಂಜಾಬ್‌‌ನಿಂದ ಅಕ್ಕಿ ತರಲು ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತದೆ. 2 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅಕ್ಕಿ ಸಿಗುತ್ತಿಲ್ಲ. ನಾವು ಕೇಂದ್ರ ಸರ್ಕಾರದ ಮೂರು ಏಜೆನ್ಸಿಗಳಿಂದ ಕೊಟೆಶನ್ ಕರೆದಿದ್ದೇವೆ. ಎಷ್ಟು ಅಕ್ಕಿ ಪೂರೈಸಲು ಸಾಧ್ಯ, ಬೆಲೆ, ಪ್ರಮಾಣದ ಬಗ್ಗೆ ಕೊಟೆಶನ್ ಕರೆದಿದ್ದೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಫೇಕ್ ನ್ಯೂಸ್‌ ಮೂಲ ಪತ್ತೆ ಮಾಡಲು ಸಿಎಂ ಖಡಕ್ ಸೂಚನೆ: ಸಾಮಾಜಿಕ ಜಾಲತಾಣ ಬಳಕೆದಾರರೇ ಎಚ್ಚರ ಎಚ್ಚರ

ಬಡವರ ವಿಷಯದಲ್ಲಿ ದ್ವೇಷದ ರಾಜಕೀಯ ಮಾಡುತ್ತಾರಲ್ಲ, ಇವರಿಗೆ ಮಾನ, ಮರ್ಯಾದೆ, ಮಾನವೀಯತೆ ಇದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದ್ವೇಷದ ರಾಜಕೀಯ ಖಂಡಿಸಿ ನಾವು ಪ್ರತಿಭಟನೆ ಮಾಡಿದ್ದೇವೆ. ದುರುದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ನಾವೇನು ಪುಕ್ಕಟ್ಟೆ ಕೇಳಿಲ್ಲ. ಒಪ್ಪಿಕೊಂಡು ಇಲ್ಲ ಎಂದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನರಿಗೆ ನಾವು ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ. ಕೇಂದ್ರ ಸರ್ಕಾರದಿಂದ ನಾವು ಪುಕ್ಕಟೆಯಾಗಿ ಅಕ್ಕಿ ಕೇಳಿರಲಿಲ್ಲ. ಬಡವರ ಅಕ್ಕಿಯಲ್ಲೂ ದ್ವೇಷದ ರಾಜಕಾರಣ ಮಾಡ್ತಿದ್ದಾರಲ್ಲ. ಬಿಜೆಪಿಯವರಿಗೆ ಮಾನ, ಮರ್ಯಾದೆ ಇದೆಯಾ? ನಾಳೆ ರಾಷ್ಟ್ರಪತಿ, ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:48 pm, Tue, 20 June 23