ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವವರು ಮತ್ತು ಪಕ್ಷವು ಅವಕಾಶ ನೀಡಬಹುದಾದ ಮೂರ್ನಾಲ್ಕು ಜನರ ಹೆಸರುಗಳನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಪಟ್ಟಿಯನ್ನು ಕೇಂದ್ರೀಯ ಸಮಿತಿಗೆ ರವಾನಿಸುತ್ತಾರೆ. ಎರಡೂ ಕ್ಷೇತ್ರಗಳ ಬಗ್ಗೆ ನಾವು ತರಿಸಿಕೊಂಡಿರುವ ಆಂತರಿಕ ವರದಿ ಕುರಿತು ಚರ್ಚೆ ನಡೆಯಿತು. ಈ ಮಾಹಿತಿಯನ್ನು ಬಹಿರಂಗಪಡಿಸಲು ಆಗುವುದಿಲ್ಲ. ಪರಿಷತ್ ಚುನಾವಣೆಗೆ ಪೂರಕವಾಗಿ ಸಂಘಟನಾತ್ಮಕ ಶಿಬಿರ ನಡೆಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷವನ್ನು ಸದೃಢಗೊಳಿಸುವ ದೃಷ್ಟಿಯಿಂದ ಸಂಘಟನೆ ಬಲಪಡಿಸಲು ಪ್ರವಾಸ ಆಯೋಜಿಸುವ ಕುರಿತು ಶೀಘ್ರ ತೀರ್ಮಾನ ಮಾಡುತ್ತೇವೆ. ಎರಡೂ ಕ್ಷೇತ್ರ ಗೆಲ್ಲುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಚುನಾವಣೆ ಉಸ್ತುವಾರಿ ನೇಮಕದ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯಾವ ನಾಯಕರು ಯಾವ ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು ಎಂದು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸುತ್ತಾರೆ. ಪಕ್ಷದ ಆಂತರಿಕ ಮತ್ತು ಬಾಹ್ಯ ವರದಿಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಯಿತು. ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.
ಉಪಚುನಾವಣೆಗೆ ಉಸ್ತುವಾರಿಗಳ ನೇಮಕ
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಹಾನಗಲ್ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಬಿ.ಸಿ.ಪಾಟೀಲ್ ಹಾಗೂ ಸಿಂದಗಿ ಕ್ಷೇತ್ರದ ಉಸ್ತುವಾರಿಯಾಗಿ ಲಕ್ಷ್ಮಣ ಸವದಿ ಅವರನ್ನು ನೇಮಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
(Hanagal Sindagi By Election BJP State Committee Decides to Send Names of Candidates to High Command)
ಇದನ್ನೂ ಓದಿ: ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಿಗೆ ಬೈಎಲೆಕ್ಷನ್; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರೆಡಿಯಾಗಲಿದೆ ಫೈನಲ್ ಲಿಸ್ಟ್
ಇದನ್ನೂ ಓದಿ: ಸಿಂದಗಿ ಉಪ ಚುನಾವಣೆಗೆ ಮಹೂರ್ತ ನಿಗದಿ: ಇಲ್ಲಿದೆ ಕ್ಷೇತ್ರದ ಸಂಪೂರ್ಣ ವಿವರ; ಪಕ್ಷಗಳ ಲೆಕ್ಕಾಚಾರ