ಮೇಕೆದಾಟು ಯೋಜನೆ ಆರಂಭಿಸಲು ರಾಜ್ಯಕ್ಕೆ ಒಂದು ತಿಂಗಳ ಗಡುವು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಅವರು ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ತಿಂಗಳ ಗಡುವು ನೀಡಿದ್ದಾರೆ. ಡ್ಯಾಮ್ ನಿರ್ಮಾಣ ಮಾಡೋಕೆ ಕಾರ್ಯಕ್ರಮ ರೂಪಿಸಿ. ಒಂದು ತಿಂಗಳ ಗಡುವಿನೊಳಗೆ ಯೋಜನೆ ಪ್ರಾರಂಭಿಸಿ. ಬೆಂಗಳೂರಿಗೆ ಕುಡಿಯುವ ನೀರನ್ನು ಕೊಡಿ, ವಿಳಂಬ ಮಾಡಬೇಡಿ ಎಂದು ಡಿಕೆ ಶಿವಕುಮಾರ್ ನುಡಿದಿದ್ದು, ಇದಕ್ಕೆ ಕಾನೂನು ಹೋರಾಟ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಮೇಕೆದಾಟು ಯೋಜನೆಯನ್ನ ಮಾಡುತ್ತೇವೆ ಅಂದಿದ್ದಿರಿ. ಒಳ್ಳೆಯದು. ಆದರೆ ಮೊದಲಿಗೆ ಮಹದಾಯಿ ಯೋಜನೆಯನ್ನ ತನ್ನಿ ಎಂದು ಸಿಎಂ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಮಳೆ ಅವಾಂತರ; ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆಶಿ: ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಸಿದ್ದು, ಈ ಸರ್ಕಾರಕ್ಕೆ ಹೇಳೋರು, ಕೇಳೋರು ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮದಂತಾಗಿದೆ. ಐಎಎಸ್ ಅಧಿಕಾರಿಗಳಿಗಾದರೂ ಬುದ್ಧಿ ಬೇಡವೇ ಎಂದು ಅವರು ಕಿಡಿ ಕಾರಿದ್ದಾರೆ.
ಪ್ರಿಯಾಂಕಾ ಗಾಂಧಿ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಖಂಡನೆ: ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಖಂಡನೀಯ. ಅವರು ಮಾಡಿದ ತಪ್ಪೇನು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ‘‘ರೈತರು ದೇಶದಲ್ಲಿ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಅವರ ಪರ ನಿಲ್ಲುತ್ತದೆ. ದೇಶದಲ್ಲಿರುವ ಹಿಟ್ಲರ್ ಮನಸ್ಥಿತಿ ಸರ್ಕಾರಕ್ಕೆ ಇದೇ ಸಾಕ್ಷಿ. ರಾಮ ರಾಜ್ಯ ಮಾಡುತ್ತೀವಿ ಎಂದವರಿಂದ ರಾವಣ ರಾಜ್ಯ ನಿರ್ಮಾಣವಾಗುತ್ತಿದೆ. ಒಬ್ಬ ಹೆಣ್ಣು ಮಗಳ ಮೇಲೆ ಕೈ ಹಾಕಲು ಅಧಿಕಾರ ಏನಿದೆ?’’ ಎಂದು ಅವರು ಕೇಂದ್ರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬ್ರಿಟಿಷರ ವಿರುದ್ಧ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದರು. ರೈತರು ಕಳೆದ 10 ತಿಂಗಳಿಂದ ಪ್ರತಿಭಟನೆ ಮಾಡಿದರೂ ಕೂಡ ಒಬ್ಬನೇ ಒಬ್ಬ ಸಚಿವ ರೈತರನ್ನು ಭೇಟಿ ಮಾಡಲಿಲ್ಲ. ಬ್ರಿಟಿಷರಿಗಿಂತಲೂ ಬಿಜೆಪಿ ಸರ್ಕಾರ ಒಂದು ಕೈ ಮೇಲು. ದೇಶದ ಮತದಾರ ಇಂದು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಹೋರಾಟಕ್ಕೆ ‘ನಿಮ್ಮೊಂದಿಗೆ ನಾವಿದ್ದೇವೆ, ಮುನ್ನುಗ್ಗಿ’ ಎಂದು ಬೆಂಬಲ ನೀಡಿದ್ದಾರೆ.
‘‘ದೇಶದ ಅನ್ನದಾತನಿಗೆ ರಕ್ಷಣೆ ಇಲ್ಲ. ತನ್ನ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುವ ಪರಿಸ್ಥಿತಿನ ಬಂದೊದಗಿದೆ. ರೈತನ ಮೇಲೆ ಬಿಜೆಪಿ ಮಂತ್ರಿ ಮತ್ತು ಅವರ ಕುಟುಂಬದವರು ಹತ್ಯೆ ಮಾಡಿದ್ದಾರೆ. ಒಟ್ಟು ಎಂಟು ಜನ ಸತ್ತಿದ್ದಾರೆ. ಈ ಘಟನೆಗೆ ನೈತಿಕ ಹೊಣೆಹೊತ್ತು ಯೋಗಿ ಅದಿತ್ಯನಾಥ್ ಮತ್ತು ಕೇಂದ್ರ ಸಚಿವರು ರಾಜೀನಾಮೆ ಕೊಟ್ಟು ಕ್ಷಮೆ ಕೇಳಬೇಕು. ಇದು ಇಡೀ ದೇಶದ ರೈತ ಸಮುದಾಯದ ಕೊಲೆ, ಪ್ರಜಾಪ್ರಭುತ್ವ ಕೊಲೆ ಇದು’’ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯವರನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದುದು ಇಡೀ ದೇಶಕ್ಕೆ ಎಸಗಿದ ಅವಮಾನ ಎಂದು ಅವರು ಕಿಡಿಕಾರಿದ್ದಾರೆ.
‘‘ಇಡೀ ದೇಶದಲ್ಲಿ ರೈತರು ಸಿಡಿದೆದ್ದಿದ್ದಾರೆ. ಮೃತ ರೈತರ ಮನೆಗೆ ಭೇಟಿ ನೀಡದಂತೆ ತಡೆಯಲಾಗಿದೆ. ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಖಂಡನೀಯ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ, ಸರ್ವಾಧಿಕಾರ ಇದೆ ಎಂಬುದಕ್ಕೆ ಇದೇ ಉದಾಹರಣೆ. ದೇಶದ ಪ್ರತಿ ಮತದಾರ ಇದನ್ನು ಖಂಡಿಸಬೇಕು. ದೇಶದ ರಕ್ಷಣೆಗೆ ನಾವೆಲ್ಲಾ ಮುಂದಾಗಬೇಕು. ಕೇಂದ್ರ ಸರ್ಕಾರ ಪಾಠ ಕಲಿಯುತ್ತದೆ ಎಂಬ ನಂಬಿಕೆ ಇಲ್ಲ. ದೇಶದ ಜನರೇ ಪಾಠ ಕಲಿಸಬೇಕಾಗಿದೆ’’ ಎಂದು ಅವರು ಇದೇ ವೇಳೆ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:
ಲಖಿಂಪುರ ಖೇರಿಗೆ ಭೇಟಿ ನೀಡಲು ಮುಂದಾದ ಪಂಜಾಬ್ ಸಿಎಂ; ಯುಪಿ ಸರ್ಕಾರದ ಅನುಮತಿ ಕೇಳಿ ಪತ್ರ
Covid 3rd Wave: ಹಬ್ಬಗಳಿಂದ 2 ವಾರ ಮೊದಲೇ ಭಾರತಕ್ಕೆ ಅಪ್ಪಳಿಸುತ್ತಾ ಕೊವಿಡ್ 3ನೇ ಅಲೆ?
Bombay Ravi: ಕುಖ್ಯಾತ ಡಾನ್ ಬಾಂಬೆ ರವಿ ಮೃತಪಟ್ಟಿಲ್ಲವೆಂಬ ಅನುಮಾನ; ಚುರುಕುಗೊಂಡ ತನಿಖೆ
Published On - 1:07 pm, Mon, 4 October 21