ಲಖಿಂಪುರ ಖೇರಿಗೆ ಭೇಟಿ ನೀಡಲು ಮುಂದಾದ ಪಂಜಾಬ್ ಸಿಎಂ; ಯುಪಿ ಸರ್ಕಾರದ ಅನುಮತಿ ಕೇಳಿ ಪತ್ರ
ಲಖಿಂಪುರ ಭೇಟಿಗೆ ಅನುಮತಿ ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಪಂಜಾಬ್ ಸರ್ಕಾರದ ಕಚೇರಿಯಿಂದ ಪತ್ರವನ್ನೂ ಬರೆಯಲಾಗಿದೆ. ಚಾಪರ್ ಲ್ಯಾಂಡ್ ಆಗಲು ಅನುಮತಿ ಕೊಡಿ ಎಂದು ಕೇಳಿದೆ.
ಚಂಡಿಗಢ್: ನಿನ್ನೆ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿರುವ ಲಖಿಂಪುರ ಖೇರಿ (Lakhimpur Kheri Violence)ಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ(Punjab CM Charanjit Channi) ಮುಂದಾಗಿದ್ದಾರೆ. ಟ್ವೀಟ್ ಮಾಡಿರುವ ಛನ್ನಿ, ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಹಾಗೇ, ನಾನು ಲಖಿಂಪುರ ಖೇರಿ(Lakhimpur Kheri)ಗೆ ತೆರಳಲು ಇಚ್ಛಿಸಿದ್ದೇನೆ. ಆ ರೈತರ ಕುಟುಂಬದೊಟ್ಟಿಗೆ ನಾವು ನಿಲ್ಲಬೇಕು. ಚಾಪರ್ ಮೂಲಕ ಗಲಾಟೆ ನಡೆಯುತ್ತಿರುವ ಸ್ಥಳಕ್ಕೆ ಹೋಗಲಿದ್ದು, ಇದಕ್ಕಾಗಿ ಉತ್ತರಪ್ರದೇಶ ಸರ್ಕಾರ ಅನುಮತಿ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ.
ಹಾಗೇ ಲಖಿಂಪುರ ಭೇಟಿಗೆ ಅನುಮತಿ ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಪಂಜಾಬ್ ಸರ್ಕಾರದ ಕಚೇರಿಯಿಂದ ಪತ್ರವನ್ನೂ ಬರೆಯಲಾಗಿದೆ. ಉತ್ತರಪ್ರದೇಶ ಹೆಚ್ಚುವರಿ ಕಾರ್ಯದರ್ಶಿ ಅವನೀಶ್ ಅಶ್ವಥಿ ಅವರಿಗೆ ಪತ್ರ ಬರೆದಿರುವ ಪಂಜಾಬ್ ನಾಗರಿಕ ವಿಮಾನಯಾನ ನಿರ್ದೇಶಕ, ಲಖಿಂಪುರದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾರು ಹರಿದು ದುರಂತ ನಡೆದಿದೆ. ಅಲ್ಲಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಪಂಜಾಬ್ ಮುಖ್ಯಮಂತ್ರಿ ಭೇಟಿ ನೀಡಲು ಇಚ್ಛಿಸಿದ್ದಾರೆ. ಅವರ ಚಾಪರ್ ಅಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಉತ್ತರ ಪ್ರದೇಶ ಸರ್ಕಾರ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದು, ಸ್ಥಳದಲ್ಲಿ ಸೆಕ್ಷನ್ 144 ಹೇರಲಾಗಿದ್ದು, ಸದ್ಯ ಅಲ್ಲಿಗೆ ಯಾರಿಗೂ ಹೋಗಲು ಬಿಡುತ್ತಿಲ್ಲ ಎಂದು ಹೇಳಿದೆ ಎಂದು ಎಎನ್ಐ ವರದಿ ಮಾಡಿದೆ.
ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪಂಜಾಬ್ ಡಿಸಿಎಂ ಸುಖ್ಜಿಂದರ್ ಸಿಂಗ್ ರಾಂಧವ ಸೇರಿ ಹಲವು ಭೇಟಿ ನೀಡಲು ಮುಂದಾಗಿದ್ದರು. ಇನ್ನು ಲಖಿಂಪುರ ಖೇರಿಗೆ ಹೊರಟಿದ್ದ ಪ್ರಿಯಾಂಕಾ ಗಾಂಧಿಯನ್ನು ಸೀತಾಪುರ ಜಿಲ್ಲೆಯ ಹರಗಾಂವ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪ್ರಿಯಾಂಕಾ ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆದಿದೆ. ಹಾಗೇ, ಭೂಪೇಶ್ ಬಾಘೇಲ್ ಮತ್ತು ಸುಖ್ಜಿಂದರ್ ಸಿಂಗ್ಗೆ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡಬೇಡಿ ಎಂದು ಲಖನೌ ಏರ್ಪೋರ್ಟ್ಗೆ ಯುಪಿ ಸರ್ಕಾರ ಹೇಳಿದೆ. ಇನ್ನು ಬೆಳಗ್ಗೆಯೇ ಲಖಿಂಪುರಕ್ಕೆ ತೆರಳಲು ಮುಂದಾಗಿದ್ದ ಅಖಿಲೇಶ್ ಯಾದವ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅವರಿಗೆ ಗೃಹಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: ‘ತೆಲಂಗಾಣ ಸಿಎಂ ಕೆಸಿಆರ್ ರಾಜ್ಯದ ಗರ್ಭಿಣಿಯರಿಗೆ ಪತಿಯಿದ್ದಂತೆ..’- ಹೊಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಟಿಆರ್ಎಸ್ ಶಾಸಕ
ಕಂದಾಯ ಸಚಿವ ಆರ್.ಅಶೋಕರಿಂದ ಪಿಂಡ ಪ್ರದಾನ ಕಾರ್ಯ; ಕೊವಿಡ್‌ನಿಂದ ಮೃತಪಟ್ಟ 1 ಸಾವಿರಕ್ಕೂ ಹೆಚ್ಚು ಜನರ ಅಸ್ಥಿ ವಿಸರ್ಜನೆ